ಹುಬ್ಬಳ್ಳಿ: ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇಲ್ಲಿನ ಶಾಲೆಯೊಂದರ ಬಸ್ ಚಾಲಕನನ್ನು ಅನಾಮಧೇಯ ವ್ಯಕ್ತಿಯೊಬ್ಬ ಥಳಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಶಾಲೆಗೆ ಮಸಿ ಬಳಿಯಲು ಈ ರೀತಿ ಮಾಡಲಾಗಿದೆ ಎಂದು ಪ್ರಾಂಶುಪಾಲರು, ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಗ್ಗಾಮುಗ್ಗ ಥಳಿತಕ್ಕೊಳಗಾದ ವ್ಯಕ್ತಿಯನ್ನು ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರ ನಿವಾಸಿ ಡೇವಿಡ್ ಎಂದು ಗುರುತಿಸಲಾಗಿದೆ. ಈತ ವಿವೇಕಾನಂದ ನಗರದಲ್ಲಿರುವ ಶಾಲಾ ವಾಹನದ ಚಾಲಕನಾಗಿದ್ದು, ಅದೇ ಶಾಲೆಯ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂದು ಆರೋಪಿಸಿ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೊವನ್ನ ವೈರಲ್ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಶಾಲೆಯ ಪ್ರಾಂಶುಪಾಲರು, ನಮ್ಮ ಶಾಲೆಯ ಹೆಸರು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಶಾಲೆಯ ವಾಹನ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕೆಲ ಪಾಲಕರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದರ ವಿರುದ್ಧ ನಾವು ಶಾಲಾ ಸಿಬ್ಬಂದಿ ಜೊತೆ ಇದ್ದೇವೆ ಎಂದಿದ್ದಾರೆ.