ಹುಬ್ಬಳ್ಳಿ : ರಾಜ್ಯದೆಲ್ಲೆಡೆ ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಟೊಮೆಟೋ ಸೇರಿದಂತೆ ಹಲವು ತರಕಾರಿಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಿಂದ ನೂರರ ಗಡಿ ದಾಟಿರುವ ಟೊಮೆಟೋ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತರಕಾರಿ ಇಳುವರಿ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಇದು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ.
ಜಿಲ್ಲೆಯಲ್ಲೂ ತರಕಾರಿ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರು ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಟೊಮೆಟೊ ಬೆಲೆ 20 ರಿಂದ 30 ರೂ. ಇತ್ತು. ಇದೀಗ 100ರಿಂದ 120 ರೂಪಾಯಿಯ ಗಡಿ ದಾಟಿದೆ. ಮೆಣಸಿನಕಾಯಿ 40 ರಿಂದ 50 ಇತ್ತು. ಈಗ 100 ರೂಪಾಯಿ ಆಗಿದೆ. ದೊಣ್ಣೆಮೆಣಸು 80 ರಿಂದ 90, ಬದನೆಕಾಯಿ 80 ರಿಂದ 100, ಬೆಂಡೆಕಾಯಿ 50ರಿಂದ 60, ಹಿರೇಕಾಯಿ 60 ರಿಂದ 70, ಸೌತೆಕಾಯಿ 60ರಿಂದ 70, ಚವಳೇಕಾಯಿ 50 ರಿಂದ 60, ಹಾಗಲಕಾಯಿ 50 ರಿಂದ 60, ಕ್ಯಾರೆಟ್ 50 ರಿಂದ 60, ಹಾಗಲಕಾಯಿ 50 ರಿಂದ 60 ಹೀಗೆ ಎಲ್ಲಾ ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತಾ ಬಜಾರ್, ದುರ್ಗದಬೈಲ್, ಹಳೇ ಹುಬ್ಬಳ್ಳಿಯ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ವ್ಯಾಪಾರ ಕುಸಿತ ಕಂಡಿದೆ. ಇದರಿಂದಾಗಿ ತರಕಾರಿ ವ್ಯಾಪಾರಸ್ಥರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಸೊಪ್ಪಿನ ಬೆಲೆಯಲ್ಲೂ ಏರಿಕೆ : ತರಕಾರಿಗಳ ಬೆಲೆ ಏರಿಕೆಯ ಮಧ್ಯೆ ಸೊಪ್ಪುಗಳ ಬೆಲೆಯಲ್ಲೂ ಏರಿಕೆ ಕಂಡಿದೆ. ಕರಿಬೇವು 1 ಕೆಜಿ ಬೆಲೆ ಇದೀಗ 100 ರಿಂದ 110 ತಲುಪಿದೆ. 100 ಕಟ್ಟು ಕೊತಂಬರಿಗೆ 800 ರಿಂದ 1000 ಗಡಿ ತಲುಪಿದೆ. ಮೆಂತೆ 800 ರಿಂದ 1000 ಆಗಿದ್ದು, ಪುದೀನಾ 500 ರಿಂದ 600 ರೂಪಾಯಿಗೆ ತಲುಪಿದೆ. ಮೂಲಂಗಿ 500 ರೂ. ಪಾಲಕ್ ಕೂಡಾ 500 ರೂಪಾಯಿ ಆಗಿದೆ.
''ಬೆಲೆ ಏರಿಕೆಯಿಂದಾಗಿ ತರಕಾರಿಗಳನ್ನು ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಟೊಮೆಟೋ ಬೆಲೆ 120 ರೂ ಆಗಿದೆ. ಒಂದು ಕೆಜಿ ತೆಗೆದುಕೊಂಡು ಹೋಗವವರು ಅರ್ಧ ಕೆಜಿ ತೆಗೆದುಕೊಂಡು ಹೋಗುತ್ತಿದ್ದಾರೆ. ಎಲ್ಲ ತರಕಾರಿಗಳ ಬೆಲೆ ಏರಿಕೆ ಆಗಿದೆ. ತರಕಾರಿ ಲಭ್ಯತೆ ಕಡಿಮೆ ಇರುವುದರಿಂದ ನಮಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಅಲ್ಲದೇ ವ್ಯಾಪಾರ ಕುಸಿತ ಕಂಡಿದ್ದು, ಲಾಭ ಉಂಟಾಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿ ರವಿ ಹೇಳಿದರು.
''ಬೆಲೆ ಏರಿಕೆಯಿಂದ ಜನರು ತರಕಾರಿಗಳನ್ನು ಖರೀದಿಸಲು ಬರುತ್ತಿಲ್ಲ. ಇದರಿಂದ ನಮಗೂ ಜೀವನ ನಡೆಸಲು ಕಷ್ಟವಾಗಿದೆ. ಎಲ್ಲ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಹೀಗೇ ಆದರೆ ನಾವು ಹೇಗೆ ಜೀವನ ಮಾಡುವುದು ಎಂದು ತರಕಾರಿ ವ್ಯಾಪಾರಿ ಹನುಮವ್ವ ಅಳಲನ್ನು ತೋಡಿಕೊಂಡಿದ್ದಾರೆ.
''ತರಕಾರಿಗಳ ಬೆಲೆ ಕೇಳಿದರೆ ಮಾರುಕಟ್ಟೆಗೆ ಬರಲು ನೂರೆಂಟು ಸಲ ಯೋಚನೆ ಮಾಡುವ ಸನ್ನಿವೇಶ ಎದುರಾಗಿದೆ. ಮುಂಗಾರು ಮಳೆ ಕೊರತೆ ಹಿನ್ನೆಲೆ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಗ್ರಾಹಕ ಶೇಖಪ್ಪ ಹೇಳುತ್ತಾರೆ.
ಇದನ್ನೂ ಓದಿ : Vegetable rate: ಬೆಳಗಾವಿಯಲ್ಲಿ ಶತಕ ಬಾರಿಸಿದ ಟೊಮೆಟೋ, ಮೆಣಸಿನಕಾಯಿ ದರ: ತರಕಾರಿ ಬಲು ದುಬಾರಿ.. ಗ್ರಾಹಕರ ಜೇಬಿಗೆ ಕತ್ತರಿ