ಹುಬ್ಬಳ್ಳಿ: ಕಳೆದ 30ಕ್ಕೂ ಹೆಚ್ಚು ವರ್ಷಗಳ ಕಾಲ ರಂಗ ಭೂಮಿಯಲ್ಲಿದ್ದೇ ರಾಜ್ಯ-ರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿ ಪಡೆದ ವೀಣಾ ಆರ್.ಅಠವಲೆ ಅವರು ಅವಿರತ ಶ್ರಮಪಡುತ್ತಿರುವ ಕಲಾವಿದೆ ಅಂದ್ರೆ ತಪ್ಪಿಲ್ಲ.
ಹುಬ್ಬಳ್ಳಿ ನಿವಾಸಿ ವೀಣಾ ಅವರು ಚಿಕ್ಕವರಿದ್ದಾಗಲೇ ನಾಟಕದಲ್ಲಿ ಪರಿಣಿತಿ ಪಡೆದು ರಂಗ ಭೂಮಿ ಕಲಾವಿದೆಯಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿರುವ ಇವರು ರಂಗಾಸಕ್ತ ಮಕ್ಕಳಿಗೆ ಉಚಿತವಾಗಿ ಅಭಿನಯ ತರಬೇತಿ ನೀಡುತ್ತಿದ್ದಾರೆ.
ನೂರಕ್ಕೂ ಹೆಚ್ಚು ನಾಟಕ ಮಾಡಿರುವ ಈವರ ಸಾಧನೆಗೆ ರಾಜ್ಯ ಹಾಗೂ ಗವರ್ನರ್ ಅವಾರ್ಡ್ ಸಹ ದೊರೆತಿವೆ. ವಿವಿಧ ಸಾಂಸ್ಕೃತಿಕ ನಾಟಕಗಳನ್ನು ಕಲಿಸುವ ಮೂಲಕ ಮಕ್ಕಳ ನೆಚ್ಚಿನ ಶಿಕ್ಷಕಿಯಾಗಿದ್ದವರು.
ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಮಕ್ಕಳಿಗೆ ಟೆಂಟ್ ಶಾಲೆಯಲ್ಲಿ ಚಿಣ್ಣರ ಅಂಗಳ ಕಾರ್ಯಕ್ರಮ ನಡೆಸಿ ಅದೆಷ್ಟೋ ಮಕ್ಕಳಿಗೆ ಜೀವನ ರೂಪಿಸಿರೋದು ವಿಶೇಷ. ಅನಾಥರ ಮಾಯೆ ಎಂಬ ನಾಟಕದ ಮೂಲಕ ಜನಪ್ರಿಯತೆಯನ್ನೂ ಗಳಿಸಿದ್ದಾರೆ.
ಉತ್ತಮ ಕಲಾವಿದೆ ಪ್ರಶಸ್ತಿ, ಧಾರವಾಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಅಭಿನಯ ಭಾರತಿ ರಂಗ ಪ್ರಶಸ್ತಿ, ಧಾರವಾಡ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯಮಟ್ಟದ ಗವರ್ನರ ಅವಾರ್ಡ್, ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ “ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ. ಸತತವಾಗಿ 30 ವರ್ಷದಿಂದ ರಂಗ ಕಲಾ ಸೇವೆ ಸಲ್ಲಿಸಿದ್ದಕ್ಕಾಗಿ ರಂಗ ಕಲಾ ತಂಡದಿಂದ ಉತ್ತಮ ರಂಗ ಕಲಾವಿದೆ ” ಪ್ರಶಸ್ತಿ ಹೀಗೆ ಅನೇಕ ಬಿರುದು, ಬಾವಲಿ ಹಾಗೂ ಪ್ರಶಸ್ತಿಗಳು ಇವರಿಗೆ ಸಂದಿವೆ.
ಸದ್ಯ ಸುನಿಧಿ ಕಲಾ ಸೌರಭ ಸಂಸ್ಥೆಯಲ್ಲಿ ಮಕ್ಕಳಿಂದ ಮಕ್ಕಳಿಗಾಗಿ ನಾಟಕೊತ್ಸವ ಹಾಗೂ ಬೇಸಿಗೆ ಶಿಬಿರ, ಕವಿಗೋಷ್ಠಿ, ಕಾವ್ಯ ಸೂರು, ಹೀಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ ಮಕ್ಕಳಲ್ಲಿ ರಂಗ ಭೂಮಿ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ಈಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.