ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ಪರಿಹಾರ ದೊರಕಲಿಲ್ಲ. ಪ್ರಧಾನಿಯೂ ಬರಲಿಲ್ಲ. ಕೇಂದ್ರದ ಮಂತ್ರಿಗಳು ಬಂದರೂ ಕೇಂದ್ರ ಸರ್ಕಾರದಿಂದ ಒಂದು ನಯಾಪೈಸೆಯೂ ಬಿಡುಗಡೆಯಾಗಲಿಲ್ಲ. ಕೂಡಲೇ ರಾಜ್ಯಕ್ಕೆ ಕೇಂದ್ರ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಚೆನ್ನಮ್ಮ ವೃತ್ತದಲ್ಲಿ ಉರುಳು ಸೇವೆ ಮಾಡುವ ಮೂಲಕ ವಿನೂತವಾಗಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ, ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದಲ್ಲಿ ಹೌಡಿ ಮಸ್ತಿಯಲ್ಲಿದ್ದಾರೆ. ಆದರೆ, ರಾಜ್ಯದಲ್ಲಿ ನೆರೆ ಸಂತ್ರಸ್ತರು ಪರದಾಟ ನಡೆಸುತ್ತಿದ್ದಾರೆ. ಆ ಬಗ್ಗೆ ಪ್ರಧಾನಿಗಳಿಗೆ ಗೊತ್ತಿಲ್ಲ. ಕರ್ನಾಟಕ ರಾಜ್ಯದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಈವರೆಗೆ ಕೇಂದ್ರ ಪರಿಹಾರ ಒದಗಿಸಿಲ್ಲ. ಅಲ್ಲದೇ ಮಂತ್ರಿಮಂಡಲದಲ್ಲಿ ಸುಳ್ಳು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಹರಿಹಾಯ್ದರು.
ಇನ್ನೂ ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೇವಲ 120 ಕೋಟಿ ರೂ.ದೇಣಿಗೆ ಬಂದಿದೆ. ಇದು ಕರ್ನಾಟಕಕ್ಕೆ ಮಾಡಿದ ಅವಮಾನ. ಕನಿಷ್ಠ ಪಕ್ಷ ಸಾವಿರ ಕೋಟಿ ದೇಣಿಗೆ ಸಂಗ್ರಹವಾಗಬೇಕು. ರಾಜ್ಯದ ಶ್ರೀಮಂತರು, ಮಠ-ಮಂದಿರಗಳು ಸೇರಿ ಸಂಘ ಸಂಸ್ಥೆಗಳು ನೆರೆ ಸಂತ್ರಸ್ತರಿಗೆ ದೇಣಿಗೆ ಕೊಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ನೆರೆ ವಿಷಯದಲ್ಲಿ ರಾಜಕೀಯ ಮಾಡದೆ ಸರ್ವ ಪಕ್ಷಗಳ ಸಭೆ ಕರೆಯಬೇಕು. ಅದನ್ನು ಶಾಸನ ಸಭೆಯಲ್ಲಿ ಚರ್ಚೆ ನಡೆಸಬೇಕು. ಅಲ್ಲದೇ ಈ ಬಾರಿಯ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಿ ಸುದೀರ್ಘ ಚರ್ಚೆ ನಡೆಸಬೇಕು. ಇಲ್ಲದೇ ಹೋದರೆ ರಾಜ್ಯವನ್ನು ಬಂದ್ ಮಾಡಬೇಕಾಗುವುದು ಎಂದು ಎಚ್ಚರಿಕೆ ನೀಡಿದರು. ಮಹದಾಯಿ ವಿಚಾರಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಲೇಬೇಕು ಎಂದು ಆಗ್ರಹಿಸಿದರು.