ಧಾರವಾಡ: ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ದಾಳಿ ಮಾಡಿರುವ ಬಿಜೆಪಿ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತ ಸಂಘಟನೆಗಳ ಪ್ರಮುಖರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಡಿಸಿ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತ ಹೋರಾಟದ ನೇತೃತ್ವ ವಹಿಸಿರುವ ರಾಕೇಶ್ ಟಿಕಾಯತ್ ಅವರು ರಾಜಸ್ತಾನ ಜಿಲ್ಲೆಯ ತರ್ತಾಪೂರ ಎಂಬಲ್ಲಿ ಬಿಜೆಪಿ ಗೂಂಡಾಗಳು ಟಿಕಾಯತ್ ವಾಹನದ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.
ಟಿಕಾಯತ್ ವಾಹನದ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆ ಕಾರು ಬಿಜೆಪಿಯ ಕುಲದೀಪ್ ಯಾದವ್ ಎಂಬುವವರಿಗೆ ಸೇರಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಘಟನೆಗೆ ಕಾರಣರಾದ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.