ಹುಬ್ಬಳ್ಳಿ: ವಿಧಾನಸಭಾ ಉಪಚುನಾವಣೆಗೆ ಕನಿಷ್ಠ 7 ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ರೈತ ಸಂಘದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.
ಈ ಬಗ್ಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಅಲ್ಲದೆ ಈ ಭಾಗದಿಂದ ಶಾಸಕರು, ಸಚಿವರು, ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿಗಳಾಗಿದ್ದವರು ಉತ್ತರ ಕರ್ನಾಟಕವನ್ನು ಅತ್ಯಂತ ಹೀನಾಯ ಸ್ಥಿತಿಗೆ ತಂದಿದ್ದಾರೆ. ಪರಿಣಾಮ ಶೈಕ್ಷಣಿಕ, ವೈದ್ಯಕೀಯ, ಕೈಗಾರಿಕೆ, ನೀರಾವರಿ ಕ್ಷೇತ್ರ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಈ ಭಾಗ ವಂಚಿತವಾಗಿದೆ. ಹೀಗಾಗಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿ, ಜೋಳಿಗೆ ಹಾಕಿಕೊಂಡು "ಒಂದು ನೋಟು, ಒಂದು ವೋಟು, ಒಂದು ರೋಟಿ" ನೀಡುವಂತೆ ಮತಯಾಚನೆ ಮಾಡಲಾಗುವುದು ಎಂದರು.
ಉತ್ತರ ಕರ್ನಾಟಕದ ಗೋಕಾಕ್, ಅಥಣಿ, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರು, ವಿಯನಗರ, ಯಲ್ಲಾಪುರ ಈ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಚುನಾಯಿತ ಶಾಸಕರು, ಮೂರು ರಾಜಕೀಯ ಪಕ್ಷಗಳ ಚೆಲ್ಲಾಟದಿಂದಾಗಿ ಮರು ಚುನಾವಣೆ ಸೃಷ್ಟಿಯಾಗಿದೆ. ಇದರಿಂದ ಬೇಸತ್ತ ಮತದಾರರು ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ ಸಂಘವನ್ನು ಬೆಂಬಲಿಸಲು ತಿರ್ಮಾನಿಸಿದ್ದು, ಏಳು ಕ್ಷೇತ್ರಗಳಲ್ಲಿ ಸಂಘದ ರೈತರು ಗೆಲುವು ಸಾಧಿಸುವುದು ನಿಶ್ಚಿತ ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಳಿಯಪ್ಪ ದಬಗಲ್, ಧಾರವಾಡ ಜಿಲ್ಲಾಧ್ಯಕ್ಷ ನಾಗನಗೌಡ ಪಾಟೀಲ, ಕಾರವಾರ ಜಿಲ್ಲಾಧ್ಯಕ್ಷ ಕರೀಮ ಅಜರೇಕರ, ಶ್ಯಾಮ ವಾಲ್ಮೀಕಿ, ಮಂಜುನಾಥ ರೇವಣಕರ ಇದ್ದರು.