ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಯುಪಿಐ ಪಾವತಿ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲ ಬಸ್ಗಳಿಗೆ ಅಳವಡಿಸಲಾಗಿದ್ದು, ಶೀಘ್ರವಾಗಿ ಸಂಸ್ಥೆಯ ಎಲ್ಲಾ ಬಸ್ಗಳಿಗೂ ವಿಸ್ತರಿಸಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಆರಾಮದಾಯಕ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಫೋನ್ ಪೇ ಕಂಪನಿಯ ಸಹಯೋಗದಲ್ಲಿ ಯುಪಿಐ ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ಗಳಲ್ಲಿ ಸಪ್ಟೆಂಬರ್ 1ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು.
ಈ ನೂತನ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಿರ್ವಾಹಕರಿಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂ ಆರ್ ಕೋಡ್ ನೀಡಲಾಗಿದೆ. ನಿರ್ವಾಹಕರ ಟಿಕೆಟ್ ವಿತರಣೆ ಯಂತ್ರದಲ್ಲಿ ಅವಶ್ಯಕ ಮಾರ್ಪಾಡುಗಳನ್ನು ಮಾಡಲಾಗಿದೆ. ಹಾಗೂ ನಿರ್ವಾಹಕರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ ಮತ್ತಿತರ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಚಿಲ್ಲರೆ ಸಮಸ್ಯೆ ಪರಿಹಾರ, ನಗದು ರಹಿತ ಪ್ರಯಾಣ ಹಾಗೂ ಸಮಯದ ಉಳಿತಾಯ ಮುಂತಾದ ಪ್ರಯೋಜನಗಳಿಂದಾಗಿ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಯಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿಯವರೆಗೆ 27,498 ಯುಪಿಐ ಪಾವತಿ ವಹಿವಾಟುಗಳು ನಡೆದಿದ್ದು ರೂ.71,60,337 ಮೊತ್ತದ ಹಣ ಪಾವತಿಯಾಗಿದೆ. ಪ್ರಸ್ತುತ ಫೋನ್ ಪೇ ಕಂಪನಿಯ ಸಹಯೋಗದಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲಾ 452 ಬಸ್ಗಳಿಗೆ ವಿಸ್ತರಿಸಲಾಗಿದೆ.
ಬಹಳಷ್ಟು ಅನುಕೂಲತೆಗಳ ಹಿನ್ನೆಲೆಯಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ಇತರೆ ಬಸ್ಗಳಿಗೂ ವಿಸ್ತರಿಸುವಂತೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಯಿಂದ ಬೇಡಿಕೆ ಬರುತ್ತಿದೆ. ಈ ವ್ಯವಸ್ಥೆಯನ್ನು ಸಂಸ್ಥೆಯ ಇನ್ನುಳಿದ ಬಸ್ಗಳಿಗೆ ವಿಸ್ತರಿಸಲು ಅವಶ್ಯಕ ಸಹಯೋಗ ನೀಡುವುದಕ್ಕೆ ಹಲವಾರು ಸಾರ್ವಜನಿಕ ಹಾಗೂ ಖಾಸಗಿ ಸೇವಾದಾರ ಕಂಪನಿಗಳು ಮುಂದೆ ಬಂದಿವೆ. ಈ ಬಗ್ಗೆ ವಿಧಿ ವಿಧಾನಗಳನ್ನು ಅಂತಿಮಗೊಳಿಸಿ ಶೀಘ್ರವಾಗಿ ಸಂಸ್ಥೆಯ ಎಲ್ಲಾ 4,581 ಬಸ್ಗಳಲ್ಲಿ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ. ಯುಪಿಐ ಪಾವತಿ ಜೊತೆಗೆ ಬಸ್ಗಳಲ್ಲಿ ನಗದು ಪಾವತಿ ವ್ಯವಸ್ಥೆಯೂ ಲಭ್ಯವಿರುತ್ತದೆ ಎಂದು ಭರತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇರಳ ಸರ್ಕಾರಿ ಬಸ್ಗಳಿಗಿಲ್ಲ ವಿಮಾ ರಕ್ಷಣೆ: 'ಈಟಿವಿ ಭಾರತ್' ತನಿಖಾ ವರದಿಯಲ್ಲಿ ಬಹಿರಂಗ