ಧಾರವಾಡ : ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ಮಾಹಿತಿಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಜಿಲ್ಲೆಯಲ್ಲಿ ಬಿಜೆಪಿಗರು ಕಾಂಗ್ರೆಸ್ಗೆ ಬರುತ್ತಿದ್ದಾರೆ. ಹಾಗೇ ಧಾರವಾಡ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿಗರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ. ಬಿಜೆಪಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡ ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ ಎಂದು ಮಾಹಿತಿಯಿದೆ ಎಂದು ಲಾಡ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಿಜೆಪಿ ಅವಧಿಯ ಹಗರಣಗಳ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಯಾವ ಇಲಾಖೆಯಲ್ಲಿ ಹಗರಣ ಆಗಿದೆ ಎಲ್ಲವನ್ನು ತನಿಖೆ ಮಾಡಲಾಗುತ್ತಿದೆ. ವಿಪಕ್ಷದಲ್ಲಿದ್ದಾಗ ನಾವು ತನಿಖೆ ಮಾಡಲು ಒತ್ತಾಯ ಮಾಡಿದ್ದೇವೆ. ಆದರೆ ಈಗ ನಮ್ಮದೇ ಆಡಳಿತವಿದೆ ಅದಕ್ಕೆ ತನಿಖೆ ಮಾಡಲಾಗುತ್ತದೆ. ಅದರಲ್ಲೂ ಆರೋಗ್ಯ ಇಲಾಖೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಆಗಿದೆ ಎಂದು ಸಚಿವರು ಆರೋಪಿಸಿದರು.
ಕಳೆದ ಎರಡು ದಿನಗಳಿಂದೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶಾಸಕ ಬೈರತಿ ಬಸವರಾಜ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದರು. ಬಿಜೆಪಿ ಪಕ್ಷ ಬಿಡುವ ಸ್ಥಿತಿ ಬಂದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಮರಳಿ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ಯಾರೋ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನನಗೆ ಕಾಂಗ್ರೆಸ್ನಿಂದ ಯಾವುದೇ ಆಹ್ವಾನ ಬಂದಿಲ್ಲ. ನನ್ನನ್ನು ಆ ಪಕ್ಷದಿಂದ ಯಾರೂ ಸಂಪರ್ಕಿಸಿಲ್ಲ. ನಾನೂ ಸಹ ಆ ಪಕ್ಷವನ್ನು ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ, ಮಾನ, ಗೌರವ ಎಲ್ಲವೂ ಸಿಕ್ಕಿದೆ. ನಾನು ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ನಾನು ಕಾಂಗ್ರೆಸ್ಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ: ಆ.26 ರಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಬಿಜೆಪಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯರವರು ಕಾಂಗ್ರೆಸ್ ಸೇರುತ್ತಾರೆ ಎಂಬ ಗೊಂದಲ ಹುಟ್ಟಿಗೊಂಡಿತ್ತು. ಈ ವಿಚಾರವಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ್ದ ಎಂ ಪಿ ರೇಣುಕಾಚಾರ್ಯ ರವರು ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ನನ್ನನ್ನು ಅವರು ಕರೆದೂ ಇಲ್ಲ. ನಾನು ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲಾ ಎಂದು ಗೊಂದಲಕ್ಕೆ ತೆರೆ ಎಳೆದಿದ್ದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕನ್ನು ಬರಪಟ್ಟಿಗೆ ಸೇರಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಮೂರು ಬಾರಿ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಜನರ ಋಣವನ್ನು ತೀರಿಸಲು ಕಾಂಗ್ರೆಸ್ ನಾಯಕರ ಬಳಿ ತೆರಳಿ ಮಾಜಿ ಶಾಸಕನಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದಿದ್ದರು.
ಇದನ್ನೂ ಓದಿ : ಸಿದ್ದರಾಮಯ್ಯ ಸರ್ಕಾರದ 'ಶತಕ'ದಾಟ: ಗ್ಯಾರಂಟಿಗಳ ಜಾರಿಗೆ ಪಂಚ ಸವಾಲು