ಹುಬ್ಬಳ್ಳಿ: 6ನೇ ವೇತನ ಆಯೋಗ ಜಾರಿ ಮಾಡುವಂತೆ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದೆಲ್ಲದರ ನಡುವೆ ಸಾರಿಗೆ ನೌಕರನೊಬ್ಬ ತನ್ನ ಮಗನ ಹೃದಯ ಸಂಬಂಧಿ ಚಿಕಿತ್ಸೆಗೆಂದು ಸಾಲ ಮಾಡಿ ಇದೀಗ ಸಾಲ ತೀರಿಸಲಾಗದೇ ಕಣ್ಣೀರು ಹಾಕುತ್ತಿದ್ದಾನೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಬಸ್ ಚಾಲಕ ಬಸವರಾಜ್ ಮಗನ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಸಾಲ ಮಾಡಿಕೊಂಡಿದ್ದು, ಸಾರಿಗೆ ಇಲಾಖೆ ವೇತನ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾನೆ. ಆದರೆ, ಈ ವೇತನದಿಂದ ಜೀವನ ನಡೆಸಲು ಅಸಾಧ್ಯವಾಗಿದ್ದು, ವೇತನ ಹೆಚ್ಚಿಸುವಂತೆ ಅಂಗಲಾಚುತ್ತಿದ್ದಾರೆ.
ಆಸ್ಪತ್ರೆ ಖರ್ಚಿಗಾಗಿ 3 ಲಕ್ಷ ರೂಪಾಯಿ ಸಾಲ ಮಾಡಿದ್ದು, ಸಾರಿಗೆ ಇಲಾಖೆಯ ಆರೋಗ್ಯ ವಿಮೆ ಇದ್ದೂ ಇಲ್ಲದಂತಾಗಿದೆ. ಆಸ್ಪತ್ರೆಯ ವೆಚ್ಚ 3 ಲಕ್ಷ ತಗುಲಿದ್ದರೆ, ಸಾರಿಗೆ ಸಂಸ್ಥೆ ಕೇವಲ 52 ಸಾವಿರ ನೀಡಿ ಕೈತೊಳೆದುಕೊಂಡಿದೆ ಎಂದು ನೌಕರ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾನೆ.
ಸರ್ಕಾರ ಕೂಡಲೇ 6ನೇ ವೇತನ ಜಾರಿ ಮಾಡಿ, ಸಾಲದ ಸುಳಿಯಿಂದ ಪಾರಿ ಮಾಡುವಂತೆ ಮನವಿ ಮಾಡಿದ್ದಾನೆ.