ಹುಬ್ಬಳ್ಳಿ: ವಾಹನ ಸವಾರರೇ ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಾ?. ಮನೆಗೆ ನೋಟಿಸ್ ಬಂದಿದೀಯಾ?. ದಂಡ ಹೇಗೆ ತುಂಬಬೇಕು ಎಂಬ ಯೋಚನೆಯಲ್ಲಿದ್ದೀರಾ?. ಭಯ ಪಡಬೇಡಿ, ಇದೀಗ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರೇಟ್ ಹೊಸ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ಮೂಲಕ ತಮ್ಮ ಮೊಬೈಲ್ ಮೂಲಕವೇ ದಂಡ ತುಂಬಬಹುದಾಗಿದೆ.
ಸದ್ಯ ವಾಹನ ಸವಾರರು ರಸ್ತೆಗೆ ಇಳಿದಾಗ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ನೋಟಿಸ್ ಬರುತ್ತದೆ. ಈ ದಂಡ ತುಂಬಲು ಪೊಲೀಸ್ ಠಾಣೆ ಇಲ್ಲವೇ ಟಿಎಂಸಿ ಕೇಂದ್ರಕ್ಕೆ ಹೋಗಬೇಕಾಗಿತ್ತು. ಆದರೆ, ಇದೀಗ ದಂಡ ತುಂಬುವುದನ್ನು ಪೊಲೀಸ್ ಇಲಾಖೆ ಮತ್ತಷ್ಟು ಸರಳ ಮಾಡಿದೆ. ಇನ್ಮುಂದೆ ಸವಾರರು ಕರ್ನಾಟಕ ಒನ್ ವೆಬ್ ಪೋರ್ಟಲ್ ಅಥವಾ ಹತ್ತಿರದ ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ದಂಡ ಪಾವತಿಸಬಹುದಾಗಿದೆ.
ಈ ಸೌಲಭ್ಯವನ್ನು ಪೊಲೀಸ್ ಇಲಾಖೆ ಹುಬ್ಬಳ್ಳಿ - ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕಾರ್ಯ ರೂಪಕ್ಕೆ ತಂದಿದ್ದು, ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ತುಮಕೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿವೆ.
ಒಂದು ಅಂದಾಜಿನ ಮೇಲೆ ಕಳೆದ 6-7 ವರ್ಷಗಳಿಂದ ಹು-ಧಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಬಾಕಿ ಉಳಿದಿವೆಯಂತೆ. ಹೀಗಾಗಿ ಸಂಚಾರಿ ಪೊಲೀಸರು ಹೊಸ ಪ್ರಕರಣಗಳ ಜೊತೆಗೆ ಹಳೇ ಪ್ರಕರಣಗಳ ಪತ್ತೆಗೂ ಮುಂದಾಗಿ ಸಿಗ್ನಲ್ ಇತರೆಡೆ ವಾಹನಗಳ ನೋಂದಣಿ ಸಂಖ್ಯೆಯನ್ನು ಪಿಡಿ ಯಂತ್ರಗಳಲ್ಲಿ ಪರಿಶೀಲಿಸಿ ದಂಡ ಪಾವತಿಗೆ ಸೂಚನೆ ನೀಡುತ್ತಿದ್ದಾರೆ.
ಆದರೆ, ಸವಾರರು ಕಿಸೆಯಲ್ಲಿ ದುಡ್ಡಿಲ್ಲ ಆನ್‌ಲೈನ್ ಮೂಲಕ ಪಾವತಿಸುತ್ತೇವೆ ಎಂದು ಯುಪಿಐ ಕೋಡ್ ಬೇಡಿಕೆ ಇಡುತ್ತಿದ್ದಾರೆ. ಈ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಹೊಂದಿಲ್ಲ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ 'ಕರ್ನಾಟಕ ಒನ್' ನೆರವು ಪಡೆದಿದ್ದು, ದಂಡ ಪಾವತಿಸಲು ಪೊಲೀಸ್ ಠಾಣೆ, ಟಿಎಂಸಿ ಕೇಂದ್ರ ಸಿಗ್ನಲ್ಗಳಲ್ಲಿರುವ ಪೊಲೀಸರನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲದಾಗಿದೆ.
ಇದನ್ನೂ ಓದಿ: ಜಲಮಂಡಳಿಗೆ ಸರ್ಕಾರಿ ಇಲಾಖೆಗಳೇ ಹೊರೆ: ವಿವಿಧ ಇಲಾಖೆಗಳ ಬಾಕಿ ನೀರಿನ ಬಿಲ್ ಬರೋಬ್ಬರಿ 147 ಕೋಟಿ!