ಧಾರವಾಡ: ನೂತನ ಸಂಚಾರಿ ನಿಯಮ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ನಾಳೆ ಸಂಜೆಯೊಳಗಾಗಿ ಪರಾಮರ್ಶೆ ನಡೆಸಿ, ಶೀಘ್ರದಲ್ಲೇ ಹೊಸ ಆದೇಶ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ದುಬಾರಿ ದಂಡವನ್ನು ಪರಿಷ್ಕರಣೆ ಮಾಡಲಿದ್ದೇವೆ. ಗುಜರಾತ್ ಮತ್ತು ಮಹಾರಷ್ಟ್ರದಂತೆ ನಾವು ಕೂಡ ದಂಡ ಕಡಿಮೆ ಮಾಡಲು ಕಾನೂನು ವಿಭಾಗಕ್ಕೆ ಮನವಿ ಸಲ್ಲಿಸಿದ್ದೇವೆ. ನಾಳೆ ಸಂಜೆಯೊಳಗೆ ಪರಾಮರ್ಶೆ ಮಾಡಿ ಹೊಸ ಆದೇಶ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ರು.
ಮಹದಾಯಿ ವಿಚಾರವಾಗಿ ಮಾತುಕತೆಗೆ ಹೋಗಲು ಸಮಯ ನಿಗದಿ ಆಗಿತ್ತು. ಆದರೆ, ಗೋವಾ ಸಿಎಂ ಈ ಬಗ್ಗೆ ಆಲೋಚನೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಸಮಯ ಮುಂದೂಡಿದ್ದೇವೆ ಎಂದು ಸವದಿ ತಿಳಿಸಿದರು.
ಇನ್ನು, ಬೇರೆ ಬೇರೆ ರಾಜ್ಯಗಳಲ್ಲಿಯೂ ನೆರೆ ಬಂದ ಹಿನ್ನೆಲೆ ಕೇಂದ್ರ ಸರ್ಕಾರ ಎಲ್ಲರಿಗೂ ಒಂದೇ ಏಕಕಾಲಕ್ಕೆ ಪರಿಹಾರ ಕೊಡಬೇಕಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ತುಂಬ ಜಾಣ ಅಂದುಕೊಂಡಿರಬಹುದು ಎಂದು ಡಿಸಿಎಂ ಸವದಿ ಟಾಂಗ್ ನೀಡಿದ್ದಾರೆ.