ಹುಬ್ಬಳ್ಳಿ: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ನಾಳೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರತ್ ಬಂದ್ ಎಫೆಕ್ಟ್ ಇರುವುದಿಲ್ಲ.
ಹೌದು, ಹುಬ್ಬಳ್ಳಿ ನಗರಕ್ಕೆ ಬಹುತೇಕವಾಗಿ ಬಂದ್ ಬಿಸಿ ತಟ್ಟುವುದಿಲ್ಲ. ಕೆಲಸದಿಂದ ದೂರ ಉಳಿದು ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳು ಮುಂದಾಗಿವೆ. ಶ್ರಮಿಕ ವರ್ಗವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಿಸಿ ಕೆಲವು ಕಾರ್ಮಿಕ ಸಂಘಟನೆಗಳು ನಾಳೆ ಬೀದಿಗಿಳಿಯಲಿವೆ.
AITUC, CITU, ಪೌರ ಕಾರ್ಮಿಕರು, ಹಮಾಲರು, ಬ್ಯಾಂಕ್ ಸಿಬ್ಬಂದಿ, ಎಲ್ಐಸಿ ಪ್ರತಿನಿಧಿಗಳು, ಕಟ್ಟಡ ಕೂಲಿಕಾರರ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಅಂಬೇಡ್ಕರ್ ವೃತ್ತ ಸೇರಲಿರುವ ವಿವಿಧ ಕಾರ್ಮಿಕ ಸಂಘಟನೆ ಅಲ್ಲಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ನಡೆಸಿ, ಬಳಿಕ ಸಭೆ ನಡೆಸಿ, ಸಭೆಯ ಬಳಿಕ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲು ತೀರ್ಮಾನಿಸಿವೆ.
ನಾಳೆ ಎಂದಿನಂತೆ ಶಾಲಾ-ಕಾಲೇಜು, ಆಸ್ಪತ್ರೆ, ಬಂಕ್ ಹಾಗೂ ಸಾರಿಗೆ ವ್ಯವಸ್ಥೆ ಕಾರ್ಯ ನಿರ್ವಹಿಸಲಿದೆ. ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸದಂತೆ ಸಂಘಟನೆಗಳ ಮುಖ್ಯಸ್ಥರಿಗೆ ಹು-ಧಾ ಪೊಲೀಸ್ ಆಯುಕ್ತರು ವಾರ್ನಿಂಗ್ ನೀಡಿದ್ದಾರೆ. ಶಾಂತಿಯುತ ಮುಷ್ಕರಕ್ಕೆ ಅನುಮತಿ ನೀಡಿದ್ದು, ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.