ಹುಬ್ಬಳ್ಳಿ : ಕಳೆದ ವರ್ಷ ಅತಿವೃಷ್ಟಿಯಾಗಿ ರೈತರಿಗೆ ಬರೆ ಎಳೆದರೆ. ಈ ವರ್ಷ ಮುಂಗಾರು ಸರಿಯಾಗಿ ಆಗದೆ ರೈತರು ಸಂಕಷ್ಟದಲ್ಲಿ ಇರುವ ಬೆನ್ನಲ್ಲೇ ಅಷ್ಟೋ ಇಷ್ಟೋ ಬೆಳೆದ ಬೆಳೆಗೆ ಕಾಡು ಪ್ರಾಣಿಗಳ ಕಂಟಕ ಎದುರಾಗಿದೆ. ಇದೀಗ ಮುಂಗಾರು ಬೆಳೆ ಉಳಿಸಿಕೊಳ್ಳಲು ಧಾರವಾಡ ಜಿಲ್ಲೆಯ ಅನ್ನದಾತರು ಬಿಯರ್ ಬಾಟಲಿ ಮೊರೆ ಹೋಗಿದ್ದಾರೆ.
ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಮುಳ್ಳೊಳ್ಳಿ, ಯರಗುಪ್ಪಿ, ಚಿಕ್ಕನೇರ್ತಿ, ಯರಿನಾರಾಯಣಪುರ ಸೇರಿದಂತೆ ಬಹುತೇಕ ಹಳ್ಳಿಗಳ ರೈತರ ಜಮೀನುಗಳಲ್ಲಿ ಜಿಂಕೆಗಳ ಹಾವಳಿ ಜೋರಾಗಿದೆ. ಹಗಲು ರಾತ್ರಿ ಎನ್ನದೆ ರೈತರು ಜಮೀನು ಕಾಯುತ್ತ ಕುಳಿತಿದ್ದಾರೆ. ಆದರೂ ಜಿಂಕೆಗಳ ಹಿಂಡು ಬೆಳೆದ ಬೆಳೆ ತಿಂದು ಹೋಗುತ್ತಿವೆ. ಇವುಗಳ ಕಾಟ ಅತಿಯಾಗಿರುವ ಕಾರಣ ರೈತರು ಸ್ಥಳೀಯ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಇದರಿಂದ ಕಂಗಾಲಾಗಿದ್ದ ರೈತರು ರಸ್ತೆ ಬದಿ ಕುಡಿದು ಬಿಸಾಡಿದ ಬಿಯರ್ ಬಾಟಲಿ ಆಯ್ದು ತಂದು ಕಟ್ಟಿಗೆಗೆ ನೇತು ಹಾಕಿದ್ದಾರೆ. ಗಾಳಿಗೆ ತೂಗಾಡುವಾಗ ಬಿಯರ್ ಬಾಟಲಿಗಳು ಒಂದಕ್ಕೊಂದು ಬಡಿದಾಗ ಬರುವ ಶಬ್ದದಿಂದ ಜಿಂಕೆಗಳು ಬೆದರಿ ಜಮೀನಿಗೆ ಬಾರದೆ ಇರಲು ಈ ಉಪಾಯ ಹುಡುಕಿಕೊಂಡಿದ್ದಾರೆ. ಶೇಂಗಾ, ಹೆಸರು, ಉದ್ದು, ಸೋಯಾಬಿನ್ ಬೆಳೆಯನ್ನು ದಿನನಿತ್ಯ ಜಿಂಕೆಗಳ ಕಾಟದಿಂದ ಕಾಯುತ್ತ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ರೈತ ಬೀರಪ್ಪ ಎಂಬುವರು ಕಾಡಿನಿಂದ ನಾಡಿಗೆ ಜಿಂಕೆಗಳು ಬಂದು ಸಂಪೂರ್ಣ ಬೆಳೆ ನಾಶ ಮಾಡಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸರ್ಕಾರ ಸಹ ಈ ಬಗ್ಗೆ ಗಮನಹರಿಸುತ್ತಿಲ್ಲ. ಮುಂದೆ ನಾವು ಏನು ಮಾಡುವುದು ಎಂಬುದು ತಿಳಿದಿಲ್ಲ. ಈಗಷ್ಟೇ ಸಾಲ ಮಾಡಿ ಬೀಜ, ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದೇವೆ. ಇನ್ನೇನು ಬೆಳೆ ಮೇಲೆ ಬರುತ್ತಿದ್ದಂತೆ ಬೆಳೆಗಳನ್ನು ಜಿಂಕೆಗಳು ತಿನ್ನುತ್ತಿರುವುದರಿಂದ ಬೆಳೆಯೇ ಸಂಪೂರ್ಣ ನಾಶವಾಗಿದೆ. ಹೀಗಾಗಿ ಅರಣ್ಯ ಇಲಾಖೆ ಜಿಂಕೆ ಓಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ವಿವಿಧ ಬಗೆಯ ಹಣ್ಣುಗಳ ತೋಟಕ್ಕೆ ಕಾಡಾನೆಗಳು ದಾಳಿ : ಮತ್ತೊಂದೆಡೆ ಇತ್ತೀಚೆಗೆ ರೈತನ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದವು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೈಪುರದೊಡ್ಡಿಯಲ್ಲಿ ಜುಲೈ 9 ರಂದು ರಾತ್ರಿ ವೇಳೆ ಘಟನ ನಡೆದಿತ್ತು. ಎನ್. ಎ. ಶೆಟ್ಟಿ ಎಂಬುವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಕಳೆದ 15 ವರ್ಷಗಳಿಂದ ಬೆಳೆದಿದ್ದ ವಿವಿಧ ಬಗೆಯ ಹಣ್ಣುಗಳ ಮರಗಳಾದ ಮಾವಿನ ಮರ, ತೆಂಗಿನ ಮರ, ನೋನಿ ಹಣ್ಣು, ಬಟರ್ ಫ್ರೂಟ್, ಬಾಳೆಹಣ್ಣು ಸೇರಿದಂತೆ ಮರಗಳನ್ನು ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಹಾನಿಗೊಳಿಸಿದ್ದವು.
ಇದನ್ನೂ ಓದಿ : ಕೈಕೊಟ್ಟ ಮುಂಗಾರು: ಬೆಳೆ ನಾಶ ಮಾಡುತ್ತಿರುವ ರೈತರು.. ಮಳೆಗಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಕಣ್ಣೀರಿಟ್ಟ ಮುಸ್ಲಿಂ ಬಾಂಧವರು