ಹುಬ್ಬಳ್ಳಿ: ಪುಣೆ-ಬೆಂಗಳೂರು ರಸ್ತೆಯ ವರೂರು ಬಳಿಯ ಗಣೇಶ ಹೋಟೆಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಓರ್ವ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ದಾವಣಗೆರೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರಿನಲ್ಲಿ ನಾಲ್ಕು ಜನ ಪ್ರಯಾಣವನ್ನು ಮಾಡುತ್ತಿದ್ದರು. ಇನ್ನೇನು ಹುಬ್ಬಳ್ಳಿ ಸೇರಿಕೊಳ್ಳಬೇಕೆನ್ನುವಷ್ಟರಲ್ಲಿ ವರೂರು ಬಳಿಯ ಗಣೇಶ ಹೋಟೆಲ್ ಬಳಿ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ನಾಲ್ವರ ಪೈಕಿ ಮೂರು ಜನ ದಾವಣಗೆರೆ ಮೂಲದ ಶಾರುಖ್, ಸೋಹೆಲ್, ಫಾರುಕ್ ಎಂದು ತಿಳಿದು ಬಂದಿದ್ದು, ಮೃತಪಟ್ಟ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ರಮೇಶ ಗೋಕಾಕ್ ಭೇಟಿ ನೀಡಿ, ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಿದ್ದಾರೆ.
ಈ ಘಟನೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಬಳ್ಳಾರಿಯಲ್ಲಿ ಕೆನಾಲ್ಗೆ ಉರುಳಿದ ಪ್ಯಾಸೆಂಜರ್ ಆಟೋ.. ಇಬ್ಬರು ಸಾವು, ಉಳಿದವರ ರಕ್ಷಣೆಗೆ ಶೋಧ