ಹುಬ್ಬಳ್ಳಿ: ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಬಿಜೆಪಿ ಸಾಮಾಜಿಕ ಜಾಲತಾಣ ಸದಸ್ಯ ಸೇರಿ ಮೂವರನ್ನು ಕುಂದಗೋಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 500 ರೂ. ಮುಖಬೆಲೆಯ 47 ನೋಟುಗಳನ್ನು(23,500 ರೂ.) ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಾಲು ಮಾರುವ ಸೋಗಿನಲ್ಲಿ ಖೋಟಾ ನೋಟು ಸರಬರಾಜು ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಕುಂದಗೋಳ ಸಿಪಿಐ ಮಾರುತಿ ಗುಳಾರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬಿಜೆಪಿ ಮುಖಂಡ ಸಾಗರ್ ಕಾಶಪ್ಪ ಸೇರಿ ಮೂವರನ್ನು ಬಂಧಿಸಲಾಗಿದೆ. ಕುಂದಗೋಳದಲ್ಲಿ ಹಾಲಿನ ಅಂಗಡಿ ಇಟ್ಟುಕೊಂಡಿದ್ದ ಸಾಗರ್, ಬೇರೆ ಕಡೆಯಿಂದ ಖೋಟಾ ನೋಟು ತಂದು ಕುಂದಗೋಳ, ಸುತ್ತಮುತ್ತ ಚಲಾವಣೆ ಮಾಡುತ್ತಿದ್ದ. ಹಾಲಿನ ವ್ಯಾಪಾರದ ಜೊತೆ ಖೋಟಾ ನೋಟು ದಂಧೆ ನಡೆಸುತ್ತಿದ್ದ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರಕ್ಕೆ ಕೊರಿಯರ್ ಪಾರ್ಸೆಲ್ ನಿಷೇಧ.. ಮುಖ್ಯ ಅಧೀಕ್ಷಕರಿಂದ ಹೊಸ ಗೈಡ್ ಲೈನ್ಸ್