ನವಲಗುಂದ : ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ಪಟ್ಟಣದ ಬಸವೇಶ್ವರನಗರ, ಬಸ್ತಿ ಓಣಿ, ರಾಮಲಿಂಗ ಓಣಿಯ 3 ಜನ ಸ್ಟಾಫ್ ನರ್ಸಗಳಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಪುರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಓಣಿಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಿದ್ದಾರೆ.
ಪೌರಕಾರ್ಮಿಕರು ಈ ಪ್ರದೇಶಗಳಿಗೆ ಔಷಧ ಸಿಂಪಡಣೆ ಮಾಡಿದ್ದಾರೆ. ಸುತ್ತಲಿನ ರಸ್ತೆಗಳನ್ನು ಪುರಸಭೆ ಸಿಬ್ಬಂದಿ ಬಂದ್ ಮಾಡಿದ್ದು, ಯಾರೂ ಒಳ ಹೋಗದಂತೆ ಮತ್ತು ಹೊರಬರದಂತೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಶಿರಕೋಳ ಗ್ರಾಮದ ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ಆರ್ಎಂಪಿ ವೈದ್ಯ ನವಲಗುಂದ ಖಾಸಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದರು. ಈಗ ಆ ವೈದ್ಯನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ, ಆಸ್ಪತ್ರೆಯನ್ನು ಸ್ವಯಂ ಪ್ರೇರಿತ ಸೀಲ್‌ಡೌನ್ ಮಾಡಿ ಎಲ್ಲಾ ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ ಮೂರು ಜನ ಸ್ಟಾಫ್ ನರ್ಸ್ಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಆ ನರ್ಸ್ಗಳು ವಾಸಿಸುತ್ತಿರುವ ಓಣಿಯನ್ನು ಮಾತ್ರ ಸೀಲ್‌ಡೌನ್ ಮಾಡಲಾಗಿದೆ.
ಖಾಸಗಿ ಆಸ್ಪತ್ರೆಯಿರುವುದು ಜನಸಂದಣಿಯ ಮಾರುಕಟ್ಟೆ ಪ್ರದೇಶದಲ್ಲಾಗಿದೆ. ಈ ಏರಿಯಾದಲ್ಲಿ ನೂರಾರು ಜನ ಓಡಾಡುತ್ತಾರೆ. ಹೀಗಾಗಿ ಆಸ್ಪತ್ರೆಯಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.