ಹುಬ್ಬಳ್ಳಿ: ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಬಗ್ಗೆ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ. ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ, ಹೇಗೆ ಸರ್ಕಾರ ನಡೆಸಬೇಕು ಅನ್ನೋದು ತೋರಿಸುತ್ತೇನೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಕೈಯಲ್ಲಿ ಸರ್ಕಾರ ಕೊಡಿ. ಗುಂಡು ಹೊಡೆಯುತ್ತೀನಿ. ಬಿಜೆಪಿ ನಿಮ್ಮಪ್ಪನದು ಅಲ್ಲ, ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿದ್ದೇವೆ. ರಾಜಕೀಯ ಈಗ ಮಾತನಾಡುವುದಿಲ್ಲ. ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ. ಒಂದು ವರ್ಷದಿಂದ ಲೌಡ್ ಸ್ಪೀಕರ್ ವಿರುದ್ಧ ಹೋರಾಟ ಮಾಡ್ತಿದ್ದೀವಿ. ಇಲ್ಲಿಯವರೆಗೆ ಸುಪ್ರೀಂ ಆದೇಶ ಪಾಲನೆ ಮಾಡೋಕೆ ಆಗ್ತಿಲ್ಲ. ಸುಮಾರು 10ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಬೆಂಬಲ ನೀಡಿವೆ ಎಂದರು.
ಇದೇ ತಿಂಗಳು 8 ರಂದು ಬಿಜೆಪಿ ಶಾಸಕರ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ನೀಡಿದ 15 ಗಡುವು ಮುಗಿದು ಹೋಯಿತು. ಸರ್ಕಾರ ಏನ್ ಮಾಡ್ತಾಯಿದೆ. ಇಲ್ಲಿಯವರೆಗೂ ಯಾರು ಹೊಸ ಮೈಕ್ ಅನುಮತಿ ಪಡೆದಿಲ್ಲ. ಹಳೇ ಲೌಡ್ ಸ್ಪೀಕರ್ ಕೆಳಗಿಳಿಸಿಲ್ಲ. ನಿಮ್ಮಲ್ಲಿ ಆ ತಾಕತ್ತು ಧಮ್ ಇಲ್ಲ ಅನ್ನೋದು ಗೊತ್ತಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಮುತಾಲಿಕ್ ವಾಗ್ದಾಳಿ ನಡೆಸಿದರು.
ನೀವು ಗೆದ್ದಿದ್ದು ಹಿಂದುತ್ವದಿಂದ. ನೀವ್ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೀರಿ. ನಿಮ್ಮ ಕರ್ತವ್ಯ ಅದು ನೀವು ಮಾಡಬೇಕು. ಮುಂದಿನ ದಿನಗಳಲ್ಲಿ ಅವರನ್ನ ಆರಿಸಿ ತರಬೇಡಿ ಎಂದು ಹೇಳ್ತೇವಿ. ಮುಂದುವರಿದ ಭಾಗವಾಗಿ ಭಜನಾ ಮತ್ತು ಭಕ್ತಿ ಗೀತೆಗಳ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ವಿಚಾರ, ಇಂದಿಗೂ ಸಹ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದು ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯ ಎಂದರು.
ಇದನ್ನೂ ಓದಿ: ನನ್ನ ವಿರುದ್ಧ ಮಾಡಿದ ಆರೋಪದ ಬಗ್ಗೆ ಡಿ.ರೂಪಾ ದಾಖಲೆ ಬಿಡುಗಡೆ ಮಾಡಲಿ: ರಾಘವೇಂದ್ರ ಶೆಟ್ಟಿ
ಇದು ಮುಂದುವರಿದರೆ ಇಡೀ ಸಮಾಜ ಒಗ್ಗಟ್ಟಾಗಿ ಚಲೋ ಕಾಶ್ಮೀರ ಚಳುವಳಿಗೆ ಮುಂದಾಗಬೇಕಾಗುತ್ತದೆ. ಯಾರು ಲೌಡ್ ಸ್ಪೀಕರ್ ವಿಚಾರದಲ್ಲಿ ಕಾನೂನು ಪಾಲನೆ ಮಾಡುತ್ತಿಲ್ಲ, ಅವರಿಗೆ ನಾನು ಗುಂಡು ಹೊಡೆಯುತ್ತೀನಿ. ಸರ್ಕಾರ ನಮ್ಮ ಸುಪ್ರಭಾತಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿತು. ದೇವಸ್ಥಾನಗಳಿಗೆ ತೆರಳಿ- ಸುಪ್ರಭಾತ ಹಾಕದಂತೆ ಧಮ್ಕಿ ಹಾಕಿದ್ದಾರೆ. ಸರ್ಕಾರದ ಸೊಕ್ಕು ಅಡಗಿಸುವ ತನಕ ನನ್ನ ಹೋರಾಟ ಮುಂದುವರೆಯುತ್ತೆ ಎಂದು ಕಿಡಿಕಾರಿದರು.