ಹುಬ್ಬಳ್ಳಿ : ಕಾಂಗ್ರೆಸ್ನಿಂದ ಬಿಜೆಪಿಗೆ ಹೋದವರು ಮತ್ತೆ ಪಕ್ಷಕ್ಕೆ ಬಂದೇ ಬರ್ತಾರೆ. ನಾನೊಬ್ಬನೇ ಅದನ್ನು ಹೇಳಿಲ್ಲ. ನಮ್ಮ ಅಧ್ಯಕ್ಷರಿಂದ ಹಿಡಿದು ಎಲ್ಲರೂ ಅದನ್ನೇ ಹೇಳ್ತಿರೋದು. ಪಕ್ಷಾಂತರ ಪರ್ವ ಆರಂಭ ಆದ್ರೆ ಹೋದವರೆಲ್ಲ ಮತ್ತೆ ಬರ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಗಲಾಟೆ ವಿಚಾರ 2-3 ದಿನ ಅಷ್ಟೇ ಆಗುತ್ತದೆ. ಆ ಮೇಲೆ ತಣ್ಣಗಾಗುತ್ತದೆ. ಶಿಕ್ಷಣದಲ್ಲಿ ಹಾಗೆ ಆಗಬಾರದು. ವಿದ್ಯಾರ್ಥಿಗಳದ್ದು ಕಲಿಯುವ ವಯಸ್ಸು, ಮೊದಲು ಸರಿಯಾಗಿ ಕಲಿಯಲಿ. ತಕ್ಷಣ ಸರ್ಕಾರ ಮತ್ತು ಆಡಳಿತ ಮಂಡಳಿ ಮಧ್ಯೆ ಪ್ರವೇಶಿಸಿ ನಿಯಂತ್ರಣ ಮಾಡಬೇಕು. ಇದು ಮುಂದುವರೆಯದಂತೆ ನೋಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ನಮ್ಮ ಪಕ್ಷದಿಂದ ಹೊರಗೆ ಹೋಗಿಲ್ಲ. ಅವರು ನಮ್ಮ ಪಕ್ಷದಲ್ಲೇ ಇರುತ್ತಾರೆ ಎಂಬ ಭರವಸೆ ಇದೆ. ಹಿರಿಯರ ಸಮ್ಮುಖದಲ್ಲಿ ಈ ವಿಚಾರ ತಿಳಿಗೊಳ್ಳಲಿದೆ ಎಂದರು.
ಕಾಂಗ್ರೆಸ್ನಲ್ಲಿ ಹಿರಿಯರನ್ನು ಕಡೆಗಣನೆ ಆರೋಪ ವಿಚಾರವಾಗಿ ಉತ್ತರಿಸಿ, ಇದನ್ನೆಲ್ಲ ಹೈಕಮಾಂಡ್ ಗಮನಿಸುತ್ತದೆ. ಅದರ ಬಗ್ಗೆ ರಾಷ್ಟ್ರೀಯ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
ಮಹಾದಾಯಿ ಪಾದಯಾತ್ರೆ ವಿಚಾರದ ಬಗ್ಗೆ ಚಿಂತನೆ ನಡೆಯುತ್ತಿದೆ. ಕೋವಿಡ್ ಕಡಿಮೆಯಾದ ಮೇಲೆ ತೀರ್ಮಾನ ಮಾಡುತ್ತೇವೆ. ಗೋವಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಬಾರಿ 17 ಸ್ಥಾನಗಳನ್ನ ಗೆದ್ದಿದ್ದೆವು. ಆದರೆ, ಆಂತರಿಕ ಕಾರಣದಿಂದ ಅಧಿಕಾರ ಕೈತಪ್ಪಿತ್ತು. ಈ ಬಾರಿ 20ಕ್ಕೂ ಹೆಚ್ಚು ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದರು.
ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ