ಹುಬ್ಬಳ್ಳಿ : ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹಾಗೂ ನಾನು ಆತ್ಮೀಯರು, ಸಹೋದರರು ಇದ್ದಂತೆ. ಈ ಸಂದರ್ಭದಲ್ಲಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಆಗಬಾರದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ಟೌನ್ ಹಾಲ್ನಲ್ಲಿ ತಮ್ಮ ಕ್ಷೇತ್ರದ ಜನರ ಅನುಕೂಲಕ್ಕಾಗಿ ನೂತನ ಜನಸಂಪರ್ಕ ಕಾರ್ಯಾಲಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕಚೇರಿ ಉದ್ಘಾಟನೆಗೆ ಯಾವುದೇ ಆಮಂತ್ರಣ ಪತ್ರವನ್ನು ಮಾಡಿಸಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕೆ, ಖುಷಿಗಾಗಿ ಪ್ರದೀಪ್ ಶೆಟ್ಟರ್ ಫೋಟೋ ಕೈಬಿಟ್ಟು ಆಮಂತ್ರಣ ಪತ್ರವನ್ನು ಹರಿಬಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ಪ್ರದೀಪ್ ಶೆಟ್ಟರ್ ಅವರೊಂದಿಗೆ ಫೋನ್ ಕರೆ ಮೂಲಕ ಮಾತನಾಡಿದ್ದೇನೆ. ಅವರು ಸಮಿತಿ ಸಭೆಯ ನಿಟ್ಟಿನಲ್ಲಿ ಪ್ರವಾಸದಲ್ಲಿದ್ದಾರೆ. ಹೀಗಾಗಿ ನಾನು ಬರುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ನಾವು ನನ್ನ ಅಧಿಕೃತ ಪೇಜ್ನಲ್ಲಿ ಸ್ಪಷ್ಟನೆ ನೀಡಿದ್ದೇನೆ ಎಂದರು.
ಪ್ರದೀಪ್ ಶೆಟ್ಟರ್ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ನಮ್ಮ ಅವರ ಮಧ್ಯೆ ಯಾವುದೇ ಮನಸ್ತಾಪವಿಲ್ಲ. ಅವರು ಎಲ್ಲಿಯೂ ಮನಸ್ತಾಪ ಆಗಿದೆ ಎಂದು ಹೇಳಿಲ್ಲ. ಜಿಲ್ಲೆಯಲ್ಲಿ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆಯನ್ನು ಕರೆದಿದ್ದೇವೆ. ಪ್ರದೀಪ್ ಶೆಟ್ಟರ್ ಅವರು ಜಿಲ್ಲೆಯಿಂದ ಹೊರಗಿರುವ ಕಾರಣ ಈ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಸಮಾನ ಮನಸ್ಕರು ಇದ್ದೇವೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತೇವೆ ಎಂದರು.
ಖಾಸಗಿ ವಾಹನ ಸವಾರರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಹಲವಾರು ಅಡ್ಡಪರಿಣಾಮಗಳು ಆಗಿವೆ. ಮೊದಲು ಕಾಂಗ್ರೆಸ್ನವರು ಯಾವುದೇ ಷರತ್ತುಗಳನ್ನು ಹಾಕದೇ ಗ್ಯಾರಂಟಿ ಘೋಷಣೆ ಮಾಡಿದರು. ಆದರೆ ಇದೀಗ ಹಲವು ಷರತ್ತುಗಳನ್ನು ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಗ್ಯಾರಂಟಿಗಳಿಗೆ ಹಣ ಹೊಂದಿರುವುದು ಸವಾಲಿನ ಕೆಲಸ ಆಗಿದೆ ಎಂದರು.
ಕಾಂಗ್ರೆಸ್ನಿಂದ ಜನರಿಗೆ ಮೋಸ : ಕಾಂಗ್ರೆಸ್ನವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಗ್ಯಾರಂಟಿಯಲ್ಲಿ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಸ್ಸುಗಳಿಗೆ ಡೀಸೆಲ್ ಹಾಕಿಸೋದಕ್ಕೂ ಕಷ್ಟ ಆಗುತ್ತದೆ. ಸರ್ಕಾರದ ಮುಂದೆ ಸಮಸ್ಯೆಗಳ ಸರಮಾಲೆ ಬರಲಿದೆ. ನಾವು ವಿರೋಧ ಪಕ್ಷವಾಗಿ ರಚನಾತ್ಮಕ ಹೋರಾಟ ಮಾಡುತ್ತೇವೆ ಎಂದು ಶಾಸಕ ಟೆಂಗಿನಕಾಯಿ ತಿಳಿಸಿದರು.
ಇದನ್ನೂ ಓದಿ : ತಂಗಡಗಿ ಉತ್ತಮ ಕ್ರೀಡಾಪಟು ಮಾತ್ರವಲ್ಲ, ಚತುರ ರಾಜಕಾರಣಿ: ಜನಾರ್ದನರೆಡ್ಡಿ ಬಣ್ಣನೆ