ಹುಬ್ಬಳ್ಳಿ : ಜನನ, ಮರಣ ಪ್ರಮಾಣ ಪತ್ರ ಪಡೆಯಲು ಜನ ನಿತ್ಯ ಪಾಲಿಕೆಯ ವಲಯ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಮಾತ್ರ ಪ್ರಮಾಣ ಪತ್ರ ನೀಡಲು ಕಾಗದವೇ ಇಲ್ಲ ಎಂದು ಕುಂಟು ನೆಪ ಹೇಳುತ್ತಿದ್ದಾರಂತೆ. ಇಂತಹ ಒಂದು ಆರೋಪವನ್ನ ಸ್ಥಳೀಯರ ಪಾಲಿಕೆ ಅಧಿಕಾರಿಗಳ ವಿರುದ್ಧ ಮಾಡುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಲ್ಲ ವಲಯ ಕಚೇರಿಗಳಲ್ಲೂ ಜನನ-ಮರಣ ಪ್ರಮಾಣ ಪತ್ರ ನೀಡಲಾಗುತ್ತೆ. ಆದರೆ, ಕಳೆದೊಂದು ತಿಂಗಳಿನಿಂದ ಪ್ರಮಾಣ ಪತ್ರ ಒದಗಿಸಲು ಸರ್ಕಾರದಿಂದ ಬರಬೇಕಾದ ಕಾಗದ ಪೊರೈಕೆ ಸ್ಥಗಿತವಾಗಿದೆ. ಹಾಗಾಗಿ, ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಅಲೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಕುರಿತು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ, ಪೇಪರ್ ಸಪ್ಲೈ ಆಗಿಲ್ಲ. ಜನರು ಜನನ-ಮರಣ ಪ್ರಮಾಣ ಪತ್ರಗಳನ್ನು ಹತ್ತು ಕೇಳಿದರೆ ನಾವೂ ಕೇವಲ ಒಂದೊಂದೇ ಪೊರೈಕೆ ಮಾಡ್ತಾ ಇದ್ದೇವೆ ಎಂದು ಹೇಳುತ್ತಿದ್ದಾರೆ.
ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿಯಲ್ಲಿ ಸ್ಥಳೀಯರು ಪ್ರಮಾಣ ಪತ್ರ ಪಡೆಯಲು ಪರದಾಡುತ್ತಿದ್ದಾರೆ. ಪಾಲಿಕೆಯ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.