ಹುಬ್ಬಳ್ಳಿ: ನಗರದ ಹಳೆ ಹುಬ್ಬಳ್ಳಿಯ ಚನ್ನಪೇಟ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ- 20 ಮತ್ತು ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಕೇಂದ್ರ ಶಾಲೆಯ ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಮಹಾನಗರ ಪಾಲಿಕೆಯ ಅವೈಜ್ಞಾನಿಕ ಕ್ರಮದಿಂದ ಇಲ್ಲಿನ ಮಕ್ಕಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಈ ಎರಡು ಶಾಲೆಯ ಪಕ್ಕ ಮಹಾನಗರ ಪಾಲಿಕೆ ಸಾರ್ವಜನಿಕ ಶೌಚಾಲಯ ನಿರ್ಮಿಸಿದೆ. ಇದರ ದುರ್ವಾಸನೆಯಿಂದಾಗಿ ಸುಮಾರು 170 ರಿಂದ 200 ಮಕ್ಕಳು ಮೂಗು ಮುಚ್ಚಿಕೊಂಡು ಪ್ರತಿದಿನ ಊಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಶೌಚಾಲಯಕ್ಕೆ ಯಾವುದೇ ರೀತಿಯ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಗಬ್ಬೆದ್ದು ನಾರುತ್ತಿದೆ. ಕೆಟ್ಟ ವಾಸನೆ ಮಕ್ಕಳಿಗೆ ಮತ್ತು ಅಕ್ಕಪಕ್ಕದ ನಿವಾಸಿಗಳಿಗೆ ತುಂಬ ತೊಂದರೆ ಕೊಡುತ್ತಿದೆ ಅಂತಾರೇ ಇಲ್ಲಿನ ಮುಖ್ಯೋಪಾದ್ಯಾಯರಾದ ಶ್ರೀನಿಧಿ.
ಇಂತಹ ವಾತಾವರಣದಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ಶಾಲಾ ದಾಖಲಾತಿಗೆ ತೊಂದರೆಯಾಗುತ್ತಿದೆ. ಚರ್ಮ ರೋಗ, ಕೆಮ್ಮು, ತುರಕೆ ಸೇರಿದಂತೆ ಹಲವಾರು ರೋಗಗಳು ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಹಲವು ಅರ್ಜಿಗಳನ್ನು ನೀಡಿದರೂ ಯಾವುದೇ ಪ್ರಯೋಜನೆವಾಗಿಲ್ಲ. ಹೀಗಾಗಿ ಕೂಡಲೇ ಸಾರ್ವಜನಿಕ ಶೌಚಾಲಯ ಸ್ಥಳಾಂತರ ಮಾಡಬೇಕು ಎಂಬುದು ಇಲ್ಲಿನ ಸ್ಥಳೀಯ ಶಾಲಾ ಮಕ್ಕಳ ಒತ್ತಾಯವಾಗಿದೆ.