ಹುಬ್ಬಳ್ಳಿ: ಯೋಗಿಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕೆಂದು ಬೇಡಿಕೆ ಇತ್ತು. ಅಲ್ಲದೇ ಅವರ ಕುಟುಂಬವು ತನಿಖೆಗೆ ಒತ್ತಾಯಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ ಎಂದು ಸಣ್ಣ ಮತ್ತು ದೊಡ್ಡ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, 2016 ಜೂನ್ ತಿಂಗಳಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶ್ ಗೌಡನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಅವರ ಕೊಲೆ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕೆಂದು ಎಲ್ಲೆಡೆಯಿಂದ ಬೇಡಿಕೆ, ಒತ್ತಾಯ ಇತ್ತು. ಯೋಗಿಶ್ ಗೌಡರ ಕುಟುಂಬವು ಸಹಿತ ತನಿಖೆಗೆ ಆಗ್ರಹಿಸಿತ್ತು. ಈಗ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ತನಿಖೆ ಪೂರ್ಣಗೊಂಡ ನಂತರ ನಿಜವಾದ ಕೊಲೆಗಡುಕರು ಯಾರೆಂದು ತಿಳಿಯಲಿದೆ ಎಂದರು.
ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ನೆರವು
ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ತಿಳಿಸಿದೆ. ಕೇಂದ್ರವು ಕೂಡಾ ನೆರೆ ಅಧ್ಯಯನ ತಂಡಗಳನ್ನು ರಾಜ್ಯಕ್ಕೆ ಕಳಿಸಿತ್ತು. ಅವರ ಪೂರ್ಣ ಸಮೀಕ್ಷೆ ಮುಗಿದ ತಕ್ಷಣ ಪರಿಹಾರ ಬರುತ್ತೆ. ಇನ್ನು ನೆರೆಗೆ ಒಳಗಾದ ಕುಟುಂಬಗಳಿಗೆ ಹತ್ತು ಸಾವಿರ ರೂ.ಗಳನ್ನು ಈಗಾಗಲೇ ನೀಡಲಾಗುತ್ತಿದೆ ಎಂದರು.