ಹುಬ್ಬಳ್ಳಿ: ಭಾರತೀಯ ಸಂಪ್ರದಾಯದಲ್ಲಿ ಹೋಳಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಹೋಳಿ ಹಬ್ಬದ ಪ್ರಯುಕ್ತ ಕಾಮಣ್ಣ ಮತ್ತು ರತಿ ದೇವಿಯನ್ನು ಪ್ರತಿಷ್ಠಾಪಿಸಿ ನಂತರ ಕಾಮದಹನ ಮಾಡುವುದು ಸಾಮಾನ್ಯ. ಆದರೆ ನವಲಗುಂದದ ರಾಮಲಿಂಗ ಕಾಮಣ್ಣನ ಆಚರಣೆ ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ನೆರವೇರುತ್ತದೆ.
ಹೌದು, ರಾಮಮಲಿಂಗ ಕಾಮಣ್ಣನ ಪ್ರತಿಷ್ಠಾಪಿಸುವ ಭಕ್ತಾಧಿಗಳು ತಮ್ಮ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಅದು ಈಡೇರಿದ ಹಿನ್ನೆಲೆಯಲ್ಲಿ ತಾವು ಬೇಡಿಕೊಂಡಿರುವ ಹರಕೆಯನ್ನು ತೀರಿಸುತ್ತಾರೆ. ಬೇಡಿಕೊಂಡ ಹರಕೆಯನ್ನು ಕಾಮಣ್ಣ ಈಡೇರಿಸುತ್ತಾನೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ.
ನವಲಗುಂದದ ರಾಮಲಿಂಗ ಕಾಮಣ್ಣನ ದರ್ಶಕ್ಕೆ ಹೊರ ರಾಜ್ಯದ ಸಾವಿರಾರು ಭಕ್ತರು ಸಹ ಆಗಮಿಸುವುದು ವಿಶೇಷ. ಮಕ್ಕಳಾಗದವರು ತೊಟ್ಟಿಲು ಕಟ್ಟುವುದು, ಮದುವೆ ಆಗದವರು ಬಾಸಿಂಗವನ್ನು ಕಟ್ಟಿ ಬರುವುದು ಇಲ್ಲಿನ ಸಂಪ್ರದಾಯ.
ಭಕ್ತರ ಇಷ್ಟಾರ್ಥ ಈಡೇರಿದಾಗ ತಮ್ಮ ಮಕ್ಕಳನ್ನು ಕರೆತಂದು ತುಲಾಭಾರ ಮಾಡುವ ಮೂಲಕ ಹೋಳಿ ಕಾಮಣ್ಣನಿಗೆ ಭಕ್ತಿ ಸಮರ್ಪಿಸುತ್ತಾರೆ.