ಹುಬ್ಬಳ್ಳಿ: ಹಸಿವು ಮತ್ತು ನಿರುದ್ಯೋಗ ಸೇರಿದಂತೆ ತುತ್ತು ಅನ್ನಕ್ಕಾಗಿ ನಾನಾ ಕಾರಣಗಳಿಂದ ಸಂಕಷ್ಟದಲ್ಲಿರುವವರಿಗೆ ಕರ್ನಾಟಕ ವೆಲ್ಫೇರ್ ಪೀಸ್ ಕೌನ್ಸಿಲ್ ಎಂಬ ಮುಸ್ಲಿಂ ಸಂಸ್ಥೆ ಸತತವಾಗಿ 45 ದಿನಗಳ ಕಾಲ ನಿರ್ಗತಿಕರ ಹಸಿವು ನೀಗಿಸುತ್ತಾ ಬಂದಿದ್ದಾರೆ. ಈ ಕಾರ್ಯಕ್ಕೆ ಮಧುಮಗನೊಬ್ಬ ತನ್ನ ಮದುವೆ ಕಾರ್ಯಕ್ರಮಕ್ಕೆ ಹೋಗುವುದಕ್ಕಿಂತ ಮುನ್ನ ನಿರ್ಗತಿಕರಿಗೆ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ.
ಹುಬ್ಬಳ್ಳಿಯ ಸಿದ್ಧಾರೂಢ ರೈಲ್ವೆ ಸ್ಟೇಷನ್ ಆವರಣದಲ್ಲಿ ಕರ್ನಾಟಕ ವೆಲ್ಫೇರ್ ಪೀಸ್ ಕೌನ್ಸಿಲ್ ಈ ಸಮಾಜಮುಖಿ ಕಾರ್ಯ ಮಾಡುತ್ತಿತ್ತು. ಅದಕ್ಕೆ ಫಯಾಜ್ ಡೊಮಾನಿ ಎಂಬುವವರು ನಿರ್ಗತಿಕರಿಗೆ ತಮ್ಮದೊಂದು ಸೇವೆ ಇರಲೆಂದು ತಮ್ಮ ಮದುವೆ ದಿನದಂದು ನೂರಾರು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿ ಸ್ವತಃ ತಾವೇ ನಿಂತು ಊಟ ನೀಡಿ ಎಲ್ಲರಿಂದಲೂ ಮೆಚ್ಚುಗೆಗಳಿಸಿದ್ದಾರೆ.
ಹಸಿವಿಗೆ ಯಾವುದೇ ಧರ್ಮ-ಜಾತಿ ಇಲ್ಲ ಎಂಬ ಧ್ಯೇಯ ಇಟ್ಟುಕೊಂಡು ಮುಸ್ಲಿಂ ಸಂಘಟನೆ ಹಸಿದ ಬಡವರಿಗೆ, ಅನಾಥರಿಗೆ, ಕಾರ್ಮಿಕರ ಹಸಿವು ನೀಗಿಸುವ ಮಹತ್ವದ ಕಾರ್ಯ ಮಾಡುತ್ತಿದೆ. ದಿನಕ್ಕೆ ನೂರಾರು ಜನರು ಉದ್ಯೋಗಕ್ಕಾಗಿ ಹಳ್ಳಿಯಿಂದ ಹುಬ್ಬಳ್ಳಿಗೆ ಬರುವುದು ಸಾಮಾನ್ಯವಾಗಿದ್ದು, ಕೆಲಸ ಸಿಗದೆ ತುತ್ತು ಅನ್ನಕ್ಕಾಗಿ ಪರದಾಡುತ್ತಾರೆ. ಅಂತವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಅನ್ನದ ವ್ಯವಸ್ಥೆ ಮಾಡುತ್ತಿದೆ ಈ ಸಂಸ್ಥೆ. ಸಂಸ್ಥೆಯ ಈ ಕಾರ್ಯಕ್ಕೆ ಅನೇಕ ಮಂದಿ ಕೈ ಜೋಡಿಸುತ್ತಿದ್ದಾರೆ.