ಹುಬ್ಬಳ್ಳಿ : ಬಿಆರ್‌ಟಿಎಸ್ ಹುಬ್ಬಳ್ಳಿ-ಧಾರವಾಡ ಜನತೆಯ ಮಹತ್ವಾಕಾಂಕ್ಷೆ ಯೋಜನೆ. ಅವಳಿ ನಗರದ ನಡುವೆ ತ್ವರಿತ ಬಸ್ ಸೇವೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾದ ಯೋಜನೆ ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದೆ. ಮಳೆಗಾಲ ಬಂದ್ರೆ ಸಾಕು ರಸ್ತೆ ಕೆರೆಯಂತಾಗುತ್ತದೆ. ಸಂಚಾರಕ್ಕೆ ಸಂಚಕಾರ ತರುತ್ತಿರುವ ಈ ಯೋಜನೆ ಯಾವಾಗ ಪೂರ್ಣಗೊಳ್ಳುತ್ತೋ ಎನ್ನುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆಗೆ ಗುಣಮಟ್ಟದ ಸಾರಿಗೆ ಸಲ್ಲಿಸುವ ಸದುದ್ದೇಶದಿಂದ ಅನುಷ್ಠಾನಗೊಂಡಿರುವ ಬಿಆರ್‌ಟಿಎಸ್ ಯೋಜನೆಯು ದಿನದಿಂದ ದಿನಕ್ಕೆ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಮಳೆಗಾಲದಲ್ಲಂತೂ ಬಿಆರ್‌ಟಿಎಸ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುತ್ತದೆ. ಸೂಕ್ತ ಹಾಗೂ ಸುಗಮ ಸಂಚಾರದ ದೂರದೃಷ್ಟಿಯಿಂದ ನಿರ್ಮಾಣವಾದ ಬಿಆರ್‌ಟಿಎಸ್ ರಸ್ತೆಗಳು ಸ್ವಲ್ಪ ಮಳೆ ಸುರಿದ್ರೆ ಸಾಕು ಕೆರೆಗಳಂತಾಗುತ್ತವೆ.
ಇದರಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಿಆರ್‌ಟಿಎಸ್ ಕಾರಿಡಾರ್ನಲ್ಲಿ ನೀರು ಸಂಗ್ರಹಾಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂ. ಖರ್ಚು ಮಾಡಿದ್ರೂ ನಗರದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪ್ರಯಾಣಿಕರು ನಿತ್ಯ ಪರದಾಟ ನಡೆಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.
ಈ ಕಾಮಗಾರಿ ನಿರ್ಮಾಣಕ್ಕೆ 12 ಸಾವಿರ ಕೋಟಿ ಹಣ ಖರ್ಚಾಗಿದೆ. ಕೆಲತಿಂಗಳ ಹಿಂದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಲೋಕಾಪರ್ಣೆಗೊಳಿಸಿದ್ದಾರೆ. ಆದರೂ ಬಿಆರ್‌ಟಿಎಸ್ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಹುಬ್ಬಳ್ಳಿ-ಧಾರವಾಡ ನಡುವೆ ಬ್ಯಾರಿಕೇಡ್ ನಿರ್ಮಾಣ ಸೇರಿ ಅಲ್ಲಲ್ಲಿ ರಸ್ತೆ ಕಾಮಗಾರಿ ಉಳಿದುಕೊಂಡಿದೆ. ಐದು ವರ್ಷಗಳಿಂದ ನಡೆಯುತ್ತಿರುವ ಮಂದಗತಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.
ಬಿಆರ್‌ಟಿಎಸ್ ಅವ್ಯವಸ್ಥೆಯಿಂದ ನೂರಾರು ಅಪಘಾತ ಸಂಭವಿಸಿವೆ. ಹಲವರು ಜೀವ ಕಳೆದುಕೊಂಡಿರುವ ಉದಾಹರಣೆ ಇದೆ. ಇಂತಹ ದೊಡ್ಡ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರದ ವಾಸನೆಯು ಸಹ ಕೇಳಿ ಬರುತ್ತಿದೆ. ಆದರೆ, ತ್ವರಿತ ಬಸ್ ಸೇವೆಗಾಗಿ ನಿರ್ಮಾಣಗೊಂಡ ಬಿಆರ್‌ಟಿಎಸ್ ಕಾಮಗಾರಿಯನ್ನು ಪೂರ್ಣಗೊಳಿಸುವತ್ತ ಸರ್ಕಾರ ಗಮನಹರಿಸಬೇಕು ಎನ್ನುತ್ತಾರೆ ಸ್ಥಳೀಯರು.