ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕ ಇಂದು ಮೃತಪಟ್ಟಿದ್ದಾರೆ.
ಸುಭಾಷ್ ತರ್ಲಘಟ್ಟ ಮೃತ ಶಿಕ್ಷಕ. ಸುಬಾಷ್ ವರ್ಗಾವಣೆಗೆ ಹೆದರಿ ಕೋಮಾ ಸ್ಥಿತಿಗೆ ತಲುಪಿದ್ದರು. ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಆನಂದ ನಗರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು.
ಇತ್ತೀಚೆಗೆ ಸರ್ಕಾರ ನಡೆಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗವಾಣೆಯಲ್ಲಿ ಇವರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಾಮಗೇರಿ ಗ್ರಾಮದ ಶಾಲೆಗೆ ವರ್ಗ ಮಾಡಲಾಗಿತ್ತು. ಇದರಿಂದ ಮಾನಸಿಕ ಆಘಾತಕ್ಕೊಳಗಾಗಿ ಸುಭಾಷ್ ಕೋಮಾಕ್ಕೆ ಜಾರಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಘಟನೆಯಿಂದ ಶಿಕ್ಷಕರು ಹಾಗೂ ಅವರ ಸಂಬಂಧಿಗಳು ಆಕ್ರೋಶಗೊಂಡಿದ್ದು, ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಸರ್ಕಾರದ ನಿರ್ಧಾರಕ್ಕೆ ಶಿಕ್ಷಕನ ಪತ್ನಿ ಶೈಲಶ್ರೀ ಸೇರಿದಂತೆ ಅವರ ಸಂಬಂಧಿಕರು ತೀವ್ರವಾಗಿ ನೊಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.