ಹುಬ್ಬಳ್ಳಿ: ಗ್ರಾಮೀಣ ಭಾಗದಲ್ಲಿ ಈಗ ಗ್ರಾಮ ಪಂಚಾಯ್ತಿ ಚುನಾವಣೆ ಬಿಸಿ ಜೋರಾಗಿದೆ. ಈ ನಡುವೆ ಗ್ರಾಮ ಪಂಚಾಯಿತಿ ಬೊಕ್ಕಸಕ್ಕೆ ಭರ್ಜರಿ ತೆರಿಗೆ ದುಡ್ಡು ಹರಿದು ಬರುತ್ತಿದೆ.
ವರ್ಷವಿಡೀ ತೆರಿಗೆ ತುಂಬುವಂತೆ ಅಧಿಕಾರಿಗಳು ದುಂಬಾಲು ಬಿದ್ದರೂ ಮನೆ, ವಾಣಿಜ್ಯ ಕಟ್ಟಡ, ಜಾಗದ ತೆರಿಗೆ, ಕುಡಿಯುವ ನೀರು ಸರಬರಾಜಿನ ಶುಲ್ಕ ಕಟ್ಟಲು ಜನರು ಹಿಂದೇಟು ಹಾಕುತ್ತಿದ್ದರು. ಈಗ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತೆರಿಗೆ ಪಾವತಿಸುವುದು ಕಡ್ಡಾಯವಾಗಿದ್ದು, ತೆರಿಗೆ ಪಾವತಿಗಾಗಿ ಗ್ರಾಮ ಪಂಚಾಯ್ತಿಗೆ ಅಭ್ಯರ್ಥಿಗಳೇ ಅಲೆದಾಡುತ್ತಿದ್ದಾರೆ. ಹೀಗಾಗಿ, ಲಕ್ಷಾಂತರ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ.
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾವುದೇ ಬಾಕಿ ಉಳಿಸಿಕೊಂಡಿರುವಂತಿಲ್ಲ. ಒಂದು ವೇಳೆ ಬಾಕಿ ಉಳಿಸಿಕೊಂಡಿದ್ದರೆ, ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗುತ್ತದೆ. ಚುನಾವಣಾ ಆಯೋಗ ತೆರಿಗೆ ಪಾವತಿ ಬಾಕಿ ಇರಬಾರದು ಎಂದು ಸೂಚಿಸಿರುವುದರಿಂದ ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಕರ ಪಾವತಿಯಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿರುವ ಅಭ್ಯರ್ಥಿಗಳು 300 ರಿಂದ ಹಿಡಿದು ಸಾವಿರಾರು ರೂಪಾಯಿವರೆಗಿನ ತೆರಿಗೆ ಪಾವತಿಸುತ್ತಿದ್ದಾರೆ.