ಹುಬ್ಬಳ್ಳಿ : ಹೈಕೋರ್ಟ್ ಆದೇಶದನ್ವಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 506 ಸಿಬ್ಬಂದಿ ವರ್ಗಾವಣೆಯಲ್ಲಿ 115 ಸಿಬ್ಬಂದಿ ವರ್ಗಾವಣೆಯನ್ನು ರದ್ದುಪಡಿಸಿ ಹಾಗೂ ಅಮಾನತುಗೊಳಿಸಿದ 60 ಸಿಬ್ಬಂದಿಯಲ್ಲಿ ಮನವಿ ಸಲ್ಲಿಸಿದ 8 ಸಿಬ್ಬಂದಿಯ ಅಮಾನತು ಆದೇಶವನ್ನು ತಡೆಹಿಡಿಯಲಾಗಿದೆ ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 6ನೇ ವೇತನ ಆಯೋಗ ಶ್ರೇಣಿಯನ್ನು ಸಾರಿಗೆ ನಿಗಮಗಳಲ್ಲಿ ಜಾರಿಗೊಳಿಸಬೇಕೆಂದು 4 ನಿಗಮಗಳ ನೌಕರರು ಅನಿರ್ದಿರ್ಷಾವಧಿ ಮುಷ್ಕರ ಕೈಗೊಂಡಿದ್ದರಿಂದ 15 ದಿನಗಳ ಕಾಲ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿ ಸಂಸ್ಥೆಗೂ ಸಹ ಗಣನೀಯ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿತ್ತು.
ಮುಷ್ಕರದ ಆರಂಭದಿಂದಲೂ ಎಲ್ಲ ಚಾಲನಾ ಹಾಗೂ ತಾಂತ್ರಿಕ ಸಿಬ್ಬಂದಿಗೆ ವಿಭಾಗ ಮಟ್ಟದ ಅಧಿಕಾರಿಗಳಿಂದ ಕೇಂದ್ರ ಕಚೇರಿಯ ಮಟ್ಟದ ಅಧಿಕಾರಿಗಳಿಗೂ ವೈಯಕ್ತಿಕವಾಗಿ ಮನವರಿಕೆ ಮಾಡಿ ಸಂದೇಶ ಕಳುಹಿಸಲಾಗಿತ್ತು.
ನಿಷ್ಠಾವಂತ ಸಿಬ್ಬಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು : ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಹಾಜರಾಗಲು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದರೂ ಸಹ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಗೈರಾಗಿದ್ದರು.
ಇದರಲ್ಲಿ ಕೆಲ ಸಿಬ್ಬಂದಿ ಅಧಿಕಾರಿಗಳ ಕರೆಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಲು ಬಂದರೂ ಅವರ ಮೇಲೆ ಅನುಚಿತ ವರ್ತನೆ, ಹಲ್ಲೆ ಮಾಡುವುದು ಮತ್ತು ಸಂಸ್ಥೆಯ ವಾಹನಗಳನ್ನು ಜಖಂಗೊಳಿಸುವ ದುಸ್ಸಾಹಸಕ್ಕೆ ಇಳಿದರು. ಇಂತಹ ಘಟನೆಗಳಿಂದ ಸಂಸ್ಥೆಯ ಜಮಖಂಡಿ ಘಟಕದ ನಿಷ್ಠಾವಂತ ಹಿರಿಯ ಚಾಲಕರಾದ ಎನ್. ಬಿ.ಅವಟಿ ಅವರು ಜೀವ ಕಳೆದುಕೊಳ್ಳಬೇಕಾಯಿತು.
ಸಂಸ್ಥೆಯು ಅಗತ್ಯ ಸೇವೆಗಳ ಅಡಿಯಲ್ಲಿರುವುದರಿಂದ ಕೆಲಸವಿಲ್ಲದೇ ವೇತನವಿಲ್ಲ ಎಂಬ ಆದೇಶ, ಪತ್ರಿಕಾ ಪ್ರಕಟಣೆ, ನೋಟಿಸ್ ನೀಡಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರೂ ಸಹ ಕರ್ತವ್ಯದಿಂದ ದೂರ ಉಳಿದ ಕಾರಣ ಸಾರ್ವಜನಿಕ ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ನಾಲ್ಕು ನಿಗಮ/ಸಂಸ್ಥೆಗಳಲ್ಲಿ ಅನಿವಾರ್ಯವಾಗಿ ಶಿಸ್ತಿನ ಕ್ರಮ ಜರುಗಿಸಬೇಕಾಯಿತು.
ಹೈಕೋರ್ಟ್ ಆದೇಶದಂತೆ ಅಮಾನತು ರದ್ಧು : ಈ ಮಧ್ಯೆ ಹೈಕೋರ್ಟ್ ಸಂಸ್ಥೆಯ ಮುಷ್ಕರ ನಿರತ ಸಿಬ್ಬಂದಿಗೆ ಕೂಡಲೇ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮತ್ತು ಸಂಸ್ಥೆಗೆ ಮುಷ್ಕರ ನಿರತ ಸಿಬ್ಬಂದಿ ವರ್ಗಾವಣೆ ಮತ್ತು ಶಿಸ್ತು ಕ್ರಮ ಕುರಿತು ಕೈಗೊಂಡಿರುವ ಪ್ರಕರಣಗಳಲ್ಲಿ ಸಿಬ್ಬಂದಿ ಮನವಿಯನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ಮರುಪರಿಶೀಲಿಸುವಂತೆ ಆದೇಶಿಸಲಾಗಿತ್ತು.
365 ಚಾಲಕರು 137 ತಾಂತ್ರಿಕ ಸಿಬ್ಬಂದಿ ಮತ್ತು 4 ಆಡಳಿತ ಸಿಬ್ಬಂದಿಯನ್ನು ವರ್ಗಾಯಿಸಿ ಆದೇಶಿಸಲಾಗಿತ್ತು. ಅದರಲ್ಲಿ ಅರ್ಹ 70 ಚಾಲನಾ ಸಿಬ್ಬಂದಿ ಮತ್ತು 45 ತಾಂತ್ರಿಕ ಸಿಬ್ಬಂದಿ ವರ್ಗಾವಣೆ ಆದೇಶಗಳನ್ನು ರದ್ದುಗೊಳಿಸಲಾಗಿದೆ.
ಸಂಸ್ಥೆಯ ಸೇವೆಯಿಂದ ಒಟ್ಟು 336 ಸಿಬ್ಬಂದಿಯನ್ನ ವಜಾ/ಆಯ್ಕೆ ಪಟ್ಟಿಯಿಂದ ತೆಗೆದು ಹಾಕಿದ ಪ್ರಕರಣಗಳಲ್ಲಿ 257 ಸಿಬ್ಬಂದಿ ಮೇಲ್ಮನವಿ ಸಲ್ಲಿಸಿದ್ದು, ಸದ್ಯ ಉಳಿದ ವಿಷಯವು ಪರಿಶೀಲನಾ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.