ಹುಬ್ಬಳ್ಳಿ : ಕೋವಿಡ್ ಸಮಯದಲ್ಲೂ ಕೆಲಸ ಮಾಡದ ಕಿಮ್ಸ್ ವೈದ್ಯರನ್ನು ಕೆಲಸದಿಂದ ಅಮಾನತು ಮಾಡುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಖಡಕ್ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯ ಗ್ಲಾಸ್ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಅವರು, ಕಿಮ್ಸ್‌ನಲ್ಲಿ ಸುಮಾರು 960ಕ್ಕೂ ಹೆಚ್ಚು ವೈದ್ಯರಿದ್ದಾರೆ. ಆದ್ರೆ, ಕೋವಿಡ್ ಸಮಯದಲ್ಲೂ ಕಿಮ್ಸ್‌ಗೆ ಆಗಮಿಸಿ ಕೆಲಸ ಮಾಡುತ್ತಿಲ್ಲ.
ಕೇವಲ ಥಂಬ್ ಹಾಜರಿ ಹಾಕಿ ತಮ್ಮ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಅಂತಹ ವೈದ್ಯರನ್ನ ಅಮಾನತು ಮಾಡಿ. ಪ್ರತಿ ತಿಂಗಳು ಮೂರು ಲಕ್ಷ ವೇತನ ತೆಗೆದುಕೊಂಡರೂ ಕರ್ತವ್ಯ ನಿಷ್ಠೆ ಮರೆಯುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಲ್ಲೂ ಇಲ್ಲದಷ್ಟು ವೈದ್ಯರು ಕಿಮ್ಸ್ ಆಸ್ಪತ್ರೆಯಲ್ಲಿ ಇದ್ದಾರೆ. ಆದರೆ, ಸರಿಯಾಗಿ ಕೆಲಸ ಮಾಡ್ತಿಲ್ಲ. ಹೀಗಾಗಿ, ಕೆಲಸ ಮಾಡದ ವೈದ್ಯರನ್ನು ಕೆಲದಿಂದ ಕಿತ್ತು ಹಾಕಿ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಕೋವಿಡ್ ನಿಯಂತ್ರಣಕ್ಕೆ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಇಷ್ಟಿದ್ದರೂ ಕರ್ತವ್ಯಕ್ಕೆ ಸರಿಯಾಗಿ ಬಾರದ ವೈದ್ಯಾಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.