ಧಾರವಾಡ: ಮೇ, ಜೂನ್ನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಹಿನ್ನೆಲೆ ಎಲ್ಲಾ ಜಿಲ್ಲೆಗಳ ಡಿಡಿಪಿಯು, ಡಿಡಿಪಿಐಗಳ ಜೊತೆ ಸಂವಾದ ನಡೆಸಿದ್ದೇನೆ. ಇವತ್ತು ಬೆಳಗಾವಿ ವಿಭಾಗದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಂವಾದ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಗಂಟೆಗಳ ಕಾಲ ಸಂವಾದ ಮಾಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 8,48,203 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ನೋಂದಾಯಿತರಾಗಿದ್ದರು. ಈ ಬಾರಿ 8,75,798 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದಾರೆ. ಬೆಳಗಾವಿ ವಿಭಾಗದಲ್ಲಿ 787 ಪರೀಕ್ಷಾ ಕೇಂದ್ರಗಳು ನೋಂದಾವಣಿಯಾಗಿವೆ ಎಂದರು.
ಕಳೆದ ಬಾರಿ ಸುರಕ್ಷಿತವಾಗಿ ಪರೀಕ್ಷೆ ನಡೆಸಿದ್ದೆವು. ಈ ವರ್ಷ ಭೌತಿಕ ತರಗತಿಗಳಿಗೆ ಅಡೆತಡೆ ಬಂದಿವೆಯಾದರೂ ನಾವು ಸಿಲಬಸ್ ಮುಗಿಸಿದ್ದೇವೆ. ಪರೀಕ್ಷಾ ಕೇಂದ್ರಗಳು ಬರೀ ಪರೀಕ್ಷಾ ಕೇಂದ್ರಗಳಾಗಿರೋದಿಲ್ಲ. ಬದಲಿಗೆ ಅವೆಲ್ಲ ಸುರಕ್ಷಾ ಕೇಂದ್ರಗಳಾಗಿರುತ್ತವೆ. ಹೊರಗೆ ಮತ್ತು ಒಳಗೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಬಗ್ಗೆ ಹೆಚ್ಚು ಎಚ್ಚರಿಕೆಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೇ 24ರಿಂದ ಪಿಯುಸಿ ಪರೀಕ್ಷೆ ಆರಂಭಗೊಂಡು ಜೂನ್ 16ರವರೆಗೆ ಪರೀಕ್ಷೆ ನಡೆಯಲಿದೆ. ಇದುವರೆಗೂ 6,72,000 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದಾರೆ. ಕಳೆದ ವರ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ ಎಂದರು.