ವೀಕ್ಷಕರ ಮುಂದೆಯೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಶಕ್ತಿ ಪ್ರದರ್ಶನ - supporters of Congress ticket aspirants
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಗಲಾಟೆ - ಬೆಂಬಲಿಗರ ನಡುವೆ ಮಾತಿನ ಜಟಾಪಟಿ - ಪರಿಸ್ಥಿತಿ ತಿಳಿಗೊಳಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು
ಹುಬ್ಬಳ್ಳಿ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಿತಿ ಸಭೆ ಸಂದರ್ಭದಲ್ಲಿ ಪಕ್ಷದ ವೀಕ್ಷಕರ ಮುಂದೆಯೇ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಶಕ್ತಿ ಪ್ರದರ್ಶನ ಹಾಗೂ ಗಲಾಟೆ ಮಾಡಿದ ಘಟನೆ ನಿನ್ನೆ ಸಂಜೆ ನಗರದ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದೆ.
ಕಾಂಗ್ರೆಸ್ನ ಹಿರಿಯ ಮುಖಂಡರು ಸಂದರ್ಶನ ರೀತಿಯಲ್ಲಿ ಕೆಪಿಸಿಸಿಗೆ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷೆಗಳೊಂದಿಗೆ ಚರ್ಚೆ ನಡೆಸಿದ್ದರು. ಆದರೆ ಅಲ್ಲಿ ಕೆಪಿಸಿಸಿಗೆ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳ ಬೆಂಬಲಿಗರು ಹಾಗೂ ಕಾರ್ಯಕರ್ತರ ದಂಡು ಕೂಡ ಜಮಾವಣೆಗೊಂಡಿತ್ತು.
ಹುಬ್ಬಳ್ಳಿ - ಧಾರಾವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ಗಾಗಿ ಮಾಜಿ ಮೇಯರ್ ಅನಿಲ್ ಕುಮಾರ್ ಪಾಟೀಲ್ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಬೆಂಬಲಿಗರ ನಡುವೆ ಮಾತಿನ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ಆಕಾಂಕ್ಷಿಗಳು ತಮ್ಮ ಹತ್ತಾರು ಬೆಂಬಲಿಗರೊಂದಿಗೆ ಬಂದು ಶಕ್ತಿಪ್ರದರ್ಶನ ಮಾಡಿದ್ದು, ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಪಾಟೀಲ್ ಹಾಗೂ ರಜತ್ ಉಳ್ಳಾಗಡ್ಡಿಮಠ ಅವರ ಅಭಿಮಾನಿಗಳು ತಮ್ಮ ನಾಯಕರಿಗೆ ಟಿಕೆಟ್ ನೀಡಬೇಕೆಂದು ಜಯಘೋಷ ಕೂಗಿದರು.
ಹೀಗಾಗಿ ಎರಡು ಗುಂಪುಗಳ ನಡುವೆ ಗಲಾಟೆ ವಿಕೋಪಕ್ಕೆ ತೆರಳಿ ಕಾಂಗ್ರೆಸ್ ಕಚೇರಿಯಲ್ಲಿ ಬಿರುಸಿನ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಪಕ್ಷದ ಹಿರಿಯ ಮುಖಂಡರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಮೂಡಿಗೆರೆಗೆ ಆಗಮಿಸಿದ ಡಿಕೆಶಿ... ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ