ಧಾರವಾಡ: ಯಾವುದೇ ಕಾರಣಕ್ಕೂ ಜನರು ಏಜೆಂಟರನ್ನು ಕರೆದುಕೊಂಡು ಬರುವುದು ಬೇಡ. ನಾನು ನಿಮ್ಮ ಎಲ್ಲಾ ಸಮಸ್ಯೆಗೆ ಸ್ಪಂದಿಸುತ್ತೇನೆ. ನಾನೇ ಹಳ್ಳಿಗಳಿಗೆ ಬರುತ್ತೇನೆ. ಇಲ್ಲಾಂದ್ರೆ ನನ್ನ ಚೇಂಬರ್ನಲ್ಲಿರುತ್ತೇನೆ. ಬಂದು ಭೇಟಿಯಾಗಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ. ಯಾವುದಕ್ಕೂ ಅಂಜುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಜನ ಸಂಪರ್ಕ ಸಭೆಗೆ ಬಂದ ಜನರಿಗೆ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ ಸಭೆಗೆ ಗ್ರಾಮೀಣ ಭಾಗದ ಜನರು ಆಗಮಿಸಿದ್ದರು. ಇನ್ನೇನು ಸಭೆ ಆರಂಭವಾಗುತ್ತಿದ್ದಂತೆ ವರುಣದೇವ ಅಬ್ಬರ ಶುರು ಮಾಡಿದ್ದರಿಂದ ಸಭೆಗೆ ಅಡ್ಡಿ ಉಂಟಾಯಿತು.
ಇದರಿಂದ ಗ್ರಾಮೀಣ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಿಂತುಕೊಂಡು ಜನ ಸಂಪರ್ಕ ಸಭೆ ನಡೆಸಿದ್ದು, ಸುಮಾರು 150ಕ್ಕೂ ಹೆಚ್ಚು ಜನ ಸಭೆಯಲ್ಲಿ ಭಾಗವಹಿಸಿದ್ದರು.