ಧಾರವಾಡ: ಮಾಳಮಡ್ಡಿಯ ಸ್ವಾತಿ ಸ್ಟುಡಿಯೋದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಲಕ್ಷ್ಮೀ ಸಿಂಗನಕೇರಿಯ ಸುನೀಲ ಅಲಿಯಾಸ್ ಚೋರ್ ಸುನ್ಯಾ (21) ಹಾಗೂ ಮಂಜುನಾಥ ಅಲಿಯಾಸ್ ಮಾವಿನಕಾಯಿ ಮಂಜ್ಯಾ (19) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬಜಾಜ್ ಪಲ್ಸರ್ ಬೈಕ್, ಕ್ಯಾಮೆರಾ ಮತ್ತು ಲೆನ್ಸ್ಗಳಿದ್ದ ಬ್ಯಾಗ್ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳು ಸೇರಿ 4,16,000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾಳಮಡ್ಡಿಯ ಮಂಜುನಾಥಪುರ ಕೆವಿಜಿ ಬ್ಯಾಂಕ್ ಹತ್ತಿರವಿರುವ ಕಿರುಚಿತ್ರ ನಿರ್ದೇಶಕ ದತ್ತಪ್ರಸಾದ್, ರಾಹುಲ್ ಅವರಿಗೆ ಸೇರಿದ ಸ್ವಾತಿ ಸ್ಟುಡಿಯೋದಲ್ಲಿ ಕಳ್ಳತನ ಮಾಡಿದ್ದರು. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇಂದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.