ಹುಬ್ಬಳ್ಳಿ : ಭಿಕ್ಷೆ ಬೇಡುವವರನ್ನು ಕಂಡರೆ ಮೂದಲಿಸುವವರೇ ಹೆಚ್ಚು. ಆದ್ರೆ, ವಿದ್ಯಾರ್ಥಿಯೊಬ್ಬ ಭಿಕ್ಷುಕರೊಬ್ಬರಿಗೆ ತೂಕ ಮಾಡುವ ಯಂತ್ರ ಕೊಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸಹಾಯ ಮಾಡಿದ್ದಾರೆ. ಭಿಕ್ಷೆ ಬೇಡಿಕೊಂಡು ನವನಗರದಲ್ಲಿ ಅಲೆಯುತ್ತಿದ್ದ ಭಿಕ್ಷುಕನಿಗೆ ತೂಕದ ಯಂತ್ರ ನೀಡಿ, ಸ್ವಾವಲಂಬಿ ಬದುಕುಕಟ್ಟಿಕೊಳ್ಳಲು ನೆರವಾಗಿದ್ದಾರೆ.
ಸಮಾಜ ಕಾರ್ಯ ವಿದ್ಯಾರ್ಥಿ ಸುನಿಲ್ ಜಂಗಾನಿ ನೆರವು ನೀಡಿ ಮಾನವೀಯ ಕಾರ್ಯಕ್ಕೆ ಮಾದರಿಯಾಗಿದ್ದಾರೆ. ಶಿರಸಿ ಮೂಲದ ಗಂಗಾಧರಪ್ಪ ಎಂಬ ಭಿಕ್ಷುಕ ವಿಶೇಷಚೇತನನಾಗಿದ್ದು, ಪ್ರತಿನಿತ್ಯ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇದನ್ನ ಅರಿತ ಸುನಿಲ್ ಜಂಗಾನಿ ಭಿಕ್ಷುಕ ಸಹ ಸ್ವದ್ಯೋಗ ಮಾಡಿ ಬದುಕಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಭಿಕ್ಷುಕನಿಗೆ ಕ್ಷೌರ ಮಾಡಿಸಿ, ಎರಡು ಜೊತೆ ಹೊಸ ಬಟ್ಟೆ ಕೊಟ್ಟು ಅತನಿಗೆ ಹೊಸ ರೂಪ ನೀಡಿದ್ದಾರೆ.
ಅವರಿಗೆ ತೂಕದ ಯಂತ್ರ ನೀಡಿದ್ದು, ಭಿಕ್ಷೆ ಬೇಡುವ ಬದಲು ಅದರಿಂದ ಬರುವ ಹಣದಿಂದ ಜೀವನ ನಿರ್ವಹಣೆ ಮಾಡುವಂತೆ ತಿಳಿಹೇಳಿದ್ದಾರೆ. ಲಾಕ್ಡೌನ್ ಸಮಯದಲ್ಲಿ ದಾನಿಗಳು, ಸಹೃದಯರು ಪ್ರತಿದಿನ ನಿರ್ಗತಿಕರಿಗೆ, ಬಡವರಿಗೆ, ಭಿಕ್ಷುಕರಿಗೆ ಮತ್ತು ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದರು. ಜೊತೆಗೆ ವಿದ್ಯಾರ್ಥಿಯೊಬ್ಬ ಭಿಕ್ಷುಕನೊಬ್ಬರ ಸ್ವಾವಲಂಬಿ ಬದುಕಿಗೆ ಬೆಳಕಾಗಿದ್ದು, ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.