ಹುಬ್ಬಳ್ಳಿ: ಅವರು ಹೆತ್ತವರ ಕನಸನ್ನು ನನಸು ಮಾಡಲು ಉತ್ಸುಕತೆಯಿಂದ ಶಾಲೆಗೆ ಹೋಗುತ್ತಿದ್ದವರು. ಚೂಟಿಯಾಗಿದ್ದ ಬಾಲಕರು ಎಲ್ಲರ ಮನಸ್ಸಿನಲ್ಲಿ ಮನೆ ಮಾಡಿದ್ದರು. ಆದರೆ ಅದ್ಯಾವ ವಕ್ರ ದೃಷ್ಟಿ ಮಕ್ಕಳ ಮೇಲೆ ಬಿತ್ತೋ ಗೊತ್ತಿಲ್ಲ. ನಿರ್ಮಾಣ ಹಂತದ ಶಾಲಾ ಕಟ್ಟಡದ ಗೋಡೆ ಕುಸಿದು ಬಿದ್ದು ಓರ್ವ ಬಾಲಕ ಮೃತಪಟ್ಟರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹುಬ್ಬಳ್ಳಿಯ ತಾಲ್ಲೂಕಿನ ಕಿರೇಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿನ್ನೆಯಷ್ಟೇ ಕಟ್ಟಿದ ನಿರ್ಮಾಣ ಹಂತದ ಶಾಲಾ ಗೋಡೆ ಕುಸಿದು ವಿದ್ಯಾರ್ಥಿಯೋರ್ವ ದಾರುಣವಾಗಿ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಟ ಆಡುತ್ತಾ ಶಾಲೆಯಲ್ಲಿ ಮೂತ್ರ ವಿಸರ್ಜನೆಗೆ ಹೋಗಿದ್ದವರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಮತ್ತೋರ್ವ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾನೆ.
ಮುಗಿಲು ಮುಟ್ಟಿದ ಪಾಲಕರ ಆಕ್ರಂದನ : ಘಟನೆಯಲ್ಲಿ ವಿಶೃತ್ ಬೆಳಗಲಿ (9) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಪ್ರಭು ಎಂಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ. ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ಬೆಳಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಅಪಘಾತಕ್ಕೆ ತುತ್ತಾಗಿದ್ದಾರೆ. ಸಾವನ್ನಪ್ಪಿದ ವಿದ್ಯಾರ್ಥಿ ವಿಶೃತ್ ಬೆಳಗಲಿ ಹಾಗೂ ಇನ್ನೋರ್ವ ವಿದ್ಯಾರ್ಥಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗಾಯಾಳು ಪ್ರಭು, 'ನಾವು ರಿಸೇಸ್ ಮಾಡುವಾಗ ಕಟ್ಟಡ ಕುಸಿದು ಮೈ ಮೇಲೆ ಇಟ್ಟಿಗೆ ಬಿತ್ತು. ಆಗ ನನ್ನ ಕಾಲು ಸಿಕ್ಕಿಹಾಕಿಕೊಂಡಿತು. ನನ್ನ ಎದೆ ಮೇಲೆ ಇಟ್ಟಿಗೆ ಬಿತ್ತು. ಮೃತ ವಿಶೃತ್ 2 ನೇ ತರಗತಿ ಓದುತ್ತಿದ್ದಾನೆ. ನಾನು 7ನೇ ತರಗತಿ ಓದುತ್ತಿದ್ದೇನೆ. ನಾವು ಗೋಡೆ ಮೇಲೆ ಜಿಗಿದಿಲ್ಲ, ಗೋಡೆಯನ್ನು ಕೂಡಾ ಮುಟ್ಟಿಲ್ಲ. ಅದಾಗಿಯೇ ನಮ್ಮ ಮೇಲೆ ಬಿತ್ತು' ಎಂದಿದ್ದಾನೆ.
ಹುಬ್ಬಳ್ಳಿ ತಾಲೂಕಿನ ಕಿರೇಸೂರು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶೃತ್ ಬೆಳಗಲಿ ಎಂಬ ವಿದ್ಯಾರ್ಥಿ ಬೆಳಗಿನ ಅವಧಿ ಸುಮಾರು 8 ಗಂಟೆಯ ಸಮಯದಲ್ಲಿ ಕಾಂಪೌಂಡ್ ಹಾರಿ ಬಂದಿದ್ದಾನೆ. ಆ ಸಮಯದಲ್ಲಿ ಶಿಕ್ಷಕರು ಇನ್ನೂ ಬಂದಿರಲಿಲ್ಲ. ಆ ವೇಳೆ ಘಟನೆ ನಡೆದಿದೆ. ಮತ್ತು ವಿವೇಕ ಯೋಜನೆಯಡಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಇದು ಲಿಂಟಲ್ ಲೆವೆಲ್ಗೆ ಬಂದಿದೆ. ಅಲ್ಲಿಗೆ ಹೋದಾಗ ಕಟ್ಟಡ ಕುಸಿದು ಎರಡು ಮಕ್ಕಳು ಅದರಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನೊಂದು ಮಗುವಿನ ಮೇಲೆ ಇಟ್ಟಿಗೆ ಬಿದ್ದು ಅವನಿಗೆ ಸ್ಥಳದಲ್ಲೇ ಬಹಳ ತ್ರಾಸ್ ಆಗಿದೆ ಎಂದು ವಿವರಿಸಿದರು.
ಮೃತ ಮಗುವಿಗೆ ಸರ್ಕಾರದಿಂದ ಪರಿಹಾರ ಒದಗಿಸುತ್ತೇವೆ: ಆಸ್ಪತ್ರೆಗೆ ಕರೆದುಕೊಂಡು ಬಂದ ಮೇಲೆ ಮಗು ಚೆನ್ನಾಗಿ ಆಗಿದೆ ಎಂಬುದು ಗೊತ್ತಾಗಿದೆ. ಘಟನೆ ನಡೆದಿರುವ ವಿಚಾರ ಕೇಳಿ ನಾನು ತಹಶೀಲ್ದಾರ್ ಸಾಹೇಬರು ಬಂದು ಇನ್ನೊಂದು ಮಗುವನ್ನು ವಿಚಾರಣೆ ಮಾಡಿದ್ವಿ. ನಂತರ ವೈದ್ಯರನ್ನು ಕರೆದು ಕೇಳಿದ್ವಿ. ಅವನು ಆರೋಗ್ಯವಾಗಿದ್ದಾನೆ. ಏನೂ ತೊಂದರೆ ಇಲ್ಲ ಎಂದು ಹೇಳಿದ್ರು. ಎದೆಗೆ ಒಂದು ಇಟ್ಟಿಗೆ ಬಿದ್ದಿರುವುದರಿಂದ ಒಂದು ಎಕ್ಸ್ರೇ ಮಾಡುತ್ತೇವೆ ಎಂದಿದ್ದಾರೆ. ಉಳಿದಂತೆ ಏನೂ ಇಲ್ಲ ಎಂದಿದ್ದಾರೆ. ನಿನ್ನೆಯಷ್ಟೇ ಕಟ್ಟಡದ ಕಾಮಗಾರಿ ನಡೆದಿತ್ತು. ಆಗ ಮಕ್ಕಳು ಕಟ್ಟಡ ಮೇಲೆ ಜಿಗಿದಿದ್ದಾರೆ. ಹೀಗಾಗಿ ಅವಘಡ ಸಂಭವಿಸಿದೆ. ಮೃತ ಮಗುವಿಗೆ ಸರ್ಕಾರದಿಂದ ಪರಿಹಾರ ಒದಗಿಸುತ್ತೇವೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.
ತಕ್ಷಣವೇ ನಾನು ಕೆಎಂಸಿಗೆ ಭೇಟಿ ನೀಡಿದೆ: ಶಾಲೆಯಲ್ಲಿ ವಿದ್ಯಾರ್ಥಿ ಅಸುನೀಗಿದ ಮಾಹಿತಿ ಬಂದ ತಕ್ಷಣವೇ ನಾನು ಕೆಎಂಸಿಗೆ ಭೇಟಿ ನೀಡಿದೆ. ಡಿಡಿಪಿಐ, ಬಿಇಓ, ಪಿಡ್ಬ್ಲೂಡಿಯವರು ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿ ಅಸುನೀಗಿದ್ದಾನೆ. ಇನ್ನೊಬ್ಬನ ಕಾಲು, ಎದೆಗೆ ಪೆಟ್ಟಾಗಿದೆ. ಆ ಬಗ್ಗೆ ವೈದ್ಯರೊಂದಿಗೆ ಮಾತಾಡಿದೆ. ಈಗ ಅವನಿಗೆ ಏನೂ ತೊಂದರೆ ಇಲ್ಲ. ಸರ್ಕಾರದಿಂದ ಅವನಿಗೆ ಪರಿಹಾರವನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಹಶೀಲ್ದಾರ್ ಪ್ರಕಾಶ ನಾಸಿ ತಿಳಿಸಿದ್ದಾರೆ.
ಇದನ್ನೂ ಓದಿ: ಟ್ಯೂಷನ್ ಮುಗಿಸಿಕೊಂಡ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸ್ನೇಹಿತ!