ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಟಿಪ್ಪು ಓರ್ವ ಮತಾಂಧ, ಹೀಗಾಗಿ ರಾಜ್ಯದಲ್ಲಿ ಎಲ್ಲಿಯೂ ಆತನ ಜಯಂತಿ ಆಚರಣೆ ಮಾಡಲು ಬಿಡುವುದಿಲ್ಲ. ಯಾವುದೇ ಸಂದರ್ಭದಲ್ಲೂ ನಾವು ತಡೆದೇ ತಡೆಯುತ್ತೇವೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಆಚರಣೆಗೆ ಹು-ಧಾ ಮಹಾನಗರ ಪಾಲಿಕೆ ಅನುಮತಿ ನೀಡಿರುವುದನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸಿತು. ಇಂದು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಪ್ರಮೋದ್ ಮುತಾಲಿಕ್ ಮಾತನಾಡಿ, ಟಿಪ್ಪು ಹಿಂದು ಮತ್ತು ಕನ್ನಡ ವಿರೋಧಿ. ನಮ್ಮ ಎಲ್ಲ ಮಹಾಪುರುಷರೊಂದಿಗೆ ಆತನನ್ನು ಹೋಲಿಕೆ ಮಾಡುವುದು ಸರಿಯಲ್ಲ. ಆತ ದ್ರೋಹಿ. ಯಾರ ಜಯಂತಿಯನ್ನಾದರೂ ಮಾಡಿ ಆದರೆ ಟಿಪ್ಪು ಜಯಂತಿಯನ್ನು ಮಾಡಬೇಡಿ ಎಂದು ಹರಿಹಾಯ್ದರು.
ಮಹಾನಗರ ಪಾಲಿಕೆ ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರ ಸರಿಯಲ್ಲ. ಇದನ್ನು ಶ್ರೀರಾಮ ಸೇನಾ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಟಿಪ್ಪು ಸುಲ್ತಾನ್ ಜಯಂತಿ ಬ್ಯಾನ್ ಮಾಡಲಾಗಿದೆ. ಹೀಗಿದ್ದರೂ ಮಹಾನಗರ ಪಾಲಿಕೆ ಯಾಕೆ ಅನುಮತಿ ನೀಡಿದೆ. ಇದರ ಹಿಂದೆ ರಾಜಕೀಯ ಲಾಭದ ದುರುದ್ದೇಶವಿದೆ ಎಂದು ಅಸಮಾಧಾನಗೊಂಡರು.
ಇದನ್ನೂ ಓದಿ: 'ಹುಬ್ಬಳ್ಳಿ ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಅಕ್ಷಮ್ಯ ಅಪರಾಧ'