ಧಾರವಾಡ: ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿರುವ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹೆಸರಿನಲ್ಲಿ ಕಾರ್ಮಿಕರ 8 ಗಂಟೆ ಸಮಯದ ಅವಧಿ 12 ಗಂಟೆಗೆ ವಿಸ್ತರಿಸಿದ್ದರು. ಈ ಸಂಬಂಧ ಯುಪಿ ಸಿಎಂ ಸುಗ್ರೀವಾಜ್ಞೆ ಹೊರಡಿಸಿದ್ದರು. ಇದರ ವಿರುದ್ಧ ಅಲಹದಾಬಾದ್ ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಹಾಕಲಾಗಿತ್ತು.
ಈ ಸಮಯದಲ್ಲಿ ಮೋದಿ ಎಚ್ಚರಗೊಳ್ಳಬೇಕು. ಅಹಂಕಾರ ಅಧಿಕಾರದೊಳಗೆ ಬಹಳ ಹೋಗಿದೆ ಎಂದು ಅಸಮಾಧಾನ ಹೊರ ಹಾಕಿದರು. ಮೋದಿಯವರು ಅಮಿತ್ ಶಾ ಮತ್ತು ಆದಿತ್ಯನಾಥ್ ತರಹ ಮಾತನಾಡುವುದಿಲ್ಲ. ಬಹಳ ಚಾಣಾಕ್ಷತನದಿಂದ ಮಾತನಾಡುತ್ತಾರೆ ಎಂದರು.
ಇಂದಿರಾ ಗಾಂಧಿಗೆ ಅಹಂಕಾರ ಇತ್ತು. ಅವರ ಮಗ ಸಂಜಯ್ ಗಾಂಧಿ ಮಾಡಬಾರದೆಲ್ಲವನ್ನೂ ಮಾಡಿದ. ಅದೇ ರೀತಿ ಈಗ ಕಾರ್ಮಿಕರು, ದಲಿತರು, ಆದಿವಾಸಿಗಳ ಮೇಲೆ ಇವರು ಮಾಡುತ್ತಿದ್ದಾರೆ. ಇವರು ಇಂದಿರಾ ಗಾಂಧಿ, ಸಂಜಯ್ ಗಾಂಧಿ ಹಾದಿಯಲ್ಲಿ ಹೋಗುತ್ತಿದ್ದಾರೆ. ಇದೇ ರೀತಿ ವರ್ತನೆ ಮುಂದುವರೆದರೆ ಇವರನ್ನು ನಾವು ಮನೆಗೆ ಕಳುಹಿಸಲೇಬೇಕು. ಇವರಿಗೆ ನಾಂದಿ ಹಾಡಲೇಬೇಕು. 2024ಕ್ಕೆ ಇವರನ್ನು ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದರು.