ಹುಬ್ಬಳ್ಳಿ: ಸಾಕಷ್ಟು ಜನಪರ ಯೋಜನೆ ಅನುಷ್ಠಾನದ ಮೂಲಕ ಜನಮನ್ನಣೆ ಪಡೆದ ನೈಋತ್ಯ ರೈಲ್ವೆಯು ಮತ್ತೊಂದು ಸಾಧನೆ ಮಾಡಿದೆ. ತನ್ನ ಜವಾಬ್ದಾರಿಯ ಜೊತೆಗೆ ಈಗ ಆದಾಯದಲ್ಲಿಯೂ ಕೂಡ ದಾಖಲೆ ನಿರ್ಮಿಸಿದೆ.
ನೈಋತ್ಯ ರೈಲ್ವೆ ವಲಯವು ಈ ಆರ್ಥಿಕ ವರ್ಷದ ನವೆಂಬರ್‌ವರೆಗೆ 4,447.67 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ 3,400.83 ಕೋಟಿ ರೂ. ಆದಾಯ ಕ್ರೋಢೀಕರಣವಾಗಿತ್ತು. ಈ ಬಾರಿಯ ಆದಾಯ ಶೇ. 30.78ರಷ್ಟು ಹೆಚ್ಚಾಗಿದೆ. ಅಲ್ಲದೇ ಹೊಸ ಹೊಸ ಯೋಜನೆ ಮೂಲಕ ಕೋವಿಡ್ ನಂತರದಲ್ಲಿ ದಾಖಲೆಯ ಆದಾಯವನ್ನು ತನ್ನ ಬೊಕ್ಕಸಕ್ಕೆ ಜಮಾ ಮಾಡಿಕೊಂಡಿದೆ.
ಇನ್ನು, ಕಳೆದ ನವೆಂಬರ್‌ವರೆಗೆ ಪ್ರಯಾಣಿಕರ ಸಂಚಾರದಿಂದ 1,813.58 ಕೋಟಿ ರೂ. ಆದಾಯ ಗಳಿಕೆಯಾಗಿದ್ದು, ಕಳೆದ ವರ್ಷ 927.31 ಕೋಟಿ ರೂಪಾಯಿ ಆದಾಯವಾಗಿತ್ತು. ಕಳೆದ ಬಾರಿಗಿಂತ ಶೇ. 95.57ರಷ್ಟು ಹೆಚ್ಚಿನ ಆದಾಯ ಪ್ರಯಾಣಿಕರ ಸಂಚಾರದಿಂದ ಬಂದಿದೆ.
ಟಿಕೆಟ್ ಪರಿಶೀಲನೆಯಿಂದ ಕಳೆದ ಬಾರಿ 15.72 ಕೋಟಿ ರೂ. ದಂಡ ವಸೂಲಿಯಾಗಿತ್ತು. ಈ ಬಾರಿ 37.74 ಕೋಟಿ ರೂ. ಸಂಗ್ರಹಣೆಯಾಗಿದ್ದು, ಇದರಲ್ಲಿಯೂ ಶೇ. 104.08ರಷ್ಟು ಹೆಚ್ಚಳವಾಗಿದೆ. ಸರಕು ಸಾಗಣೆಯಿಂದ ಬರುವ ಆದಾಯ ಶೇ. 16.32ರಷ್ಟು ಹೆಚ್ಚಳವಾಗಿದೆ. ಸರಕು ಸಾಗಣೆಯಿಂದ ಕಳೆದ ವರ್ಷ 80.20 ಕೋಟಿ ರೂ. ಆದಾಯ ಸಂಗ್ರಹಣೆಯಾಗಿದ್ದರೆ, ಈ ಬಾರಿ 93.29 ಕೋಟಿ ರೂ. ಆದಾಯ ಸಂಗ್ರಹಗೊಂಡಿದೆ.
ರೈಲ್ವೆ ಸಿಬ್ಬಂದಿಯ ಕಾರ್ಯಕ್ಷಮತೆಯಿಂದಾಗಿ ನೈಋತ್ಯ ವಲಯ ಉತ್ತಮ ಆದಾಯ ಗಳಿಸಿದೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕುಮಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚಾರ್ಧಾಮ್ ಯಾತ್ರೆ: 46 ಲಕ್ಷ ಯಾತ್ರಾರ್ಥಿಗಳ ಭೇಟಿ, ಹೊಸ ದಾಖಲೆ