ಧಾರವಾಡ : ಭೂ ಸುಧಾರಣಾ ಕಾಯ್ದೆಯಲ್ಲಿ ಕೆಲ ಬದಲಾವಣೆ ತರಲಾಗಿದೆ. ಇದರಿಂದ ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ತಕ್ಷಣ ಭೂಮಿ ಮಂಜೂರಾಗಲಿದೆ. ಸರ್ಕಾರದಿಂದ ಈಗಾಗಲೇ ಸುತ್ತೋಲೆ ಕೂಡ ಬಂದಿದೆ. ಕಂದಾಯ ಇಲಾಖೆಯಿಂದ ಈ ಸುತ್ತೋಲೆ ಬಂದಿದ್ದು ಕೃಷಿ ಭೂಮಿಯನ್ನ ನಿಯಮದಂತೆ ಖರೀದಿ ಮಾಡಬಹುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ನಿರ್ಬಂಧ ಇರುವಾಗ್ಲೂ ಕೆಲವರು ಬೇನಾಮಿ ಆಸ್ತಿ ಮಾಡಿದ್ದಾರೆ. ಬೇರೆಯವರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದ್ದಕ್ಕೆ ಶಿಕ್ಷೆ ದಂಡ ಎಲ್ಲವೂ ಇದೆ. ಬೇರೆಯವರ ಹೆಸರಿನಲ್ಲಿ ಬೇನಾಮಿ ಆಸ್ತಿ ಖರೀದಿ ಮಾಡುವುದು ಮೊದಲಿನಿಂದಲೂ ಇದೆ. ಭೂ ಸುಧಾರಣಾ ಕಾಯ್ದೆಯಂತೆ ಮೊದಲು 54 ಎಕರೆ ಮಾತ್ರ ಖರೀದಿ ಮಾಡಬಹುದಿತ್ತು. ಹೊಸ ಕಾಯ್ದೆಯಂತೆ ಈಗ 108 ಎಕರೆ ಖರೀದಿ ಮಾಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಾರೋ ಸ್ಥಿತಿವಂತ ಬಂದು ಸಾವಿರ ಎಕರೆ ಖರೀದಿ ಮಾಡ್ತೇನೆ ಅಂದ್ರೆ ಬರೋದಿಲ್ಲ. ಮೊದಲು ಈ ಕಾಯ್ದೆಯಲ್ಲಿ ಅಧಿಕಾರಿಗಳಿಗೆ ಭ್ರಷ್ಟಾಚಾರಕ್ಕೆ ಅವಕಾಶ ಇತ್ತು. ರಾಜ್ಯದಲ್ಲಿ ಒಂದು ಲಕ್ಷ ಎಂಬತ್ತು ಸಾವಿರ ಎಕರೆ ಜಮೀನಿಗೆ ಕಂದಾಯ ಇಲಾಖೆಯವರು ನೋಟಿಸ್ ಕೊಟ್ಟಿದ್ದರು. ಇದರಲ್ಲಿ ವಶಕ್ಕೆ ಪಡೆದಿದ್ದು ಬರೀ 53 ಎಕರೆ ಮಾತ್ರ. ಅದು ಕೂಡಾ ನ್ಯಾಯಾಲಯದಲ್ಲಿ ಚಾಲೆಂಜ್ ಆಗಿ ನಿಂತಿದೆ.
ಭೂ ಸುಧಾರಣಾ ಕಾಯ್ದೆಯಿಂದ 6 ಲಕ್ಷ ರೈತರಿಗೆ ಲಾಭವಾಗಿದೆ. ನಮ್ಮದೇ 50 ರಿಂದ 60 ಎಕರೆ ಜಮೀನು ಉಳುವವನೇ ಒಡೆಯ ಕಾಯ್ದೆಗೆ ಹೋಗಿದೆ. 6 ಎಕರೆ ಮಾತ್ರ ನಾವು ಉಳಿಸಿಕೊಳ್ಳಲು ಸಾಧ್ಯವಾಯ್ತು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.