ಹುಬ್ಬಳ್ಳಿ: ನಗರದಲ್ಲಿ ಸುರಿದ ಮಳೆಯಿಂದ ಕೆಸರುಮಯವಾಗಿದ್ದ ರಸ್ತೆಗಳ ಕುರಿತು ಈಟಿವಿ ಭಾರತ್ ಸುದ್ದಿ ಪ್ರಸಾರ ಮಾಡಿದ ಬಳಿಕ ಎಚ್ಚೆತ್ತ ಮಹಾನಗರ ಪಾಲಿಕೆ ತಾತ್ಕಾಲಿಕವಾಗಿಯಾದರೂ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.
ನಗರದಲ್ಲಿ ಸುರಿದ ಮಳೆಯಿಂದ ಬೈರಿದೇವರಕೊಪ್ಪದ ಶಾಂತಿನಿಕೇತನ ಕಾಲೋನಿಯ ರಸ್ತೆಗಳು ಕೆಸರುಗದ್ದೆಯಂತಾಗಿದ್ದವು. ಈ ಕುರಿತು ಪ್ರಕಾಶ್ ಗೋಕಾವಿ ಹಾಗೂ ಬಸವರಾಜ ಗೋಕಾವಿ ಸಹೋದರರು ಹಾಗೂ ಚಿಣ್ಣರು 'ರಸ್ತೆ ಮಾಡಿ ಜೀವ ಉಳಿಸಿ' ಎಂಬ ಹೆಸರಿನ ಅಭಿಯಾನ ಆರಂಭಿಸಿ, ಪುಟ್ಟ ಮಕ್ಕಳು ಮನವಿ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಕುರಿತು ''ಜನಪ್ರತಿನಿಧಿಗಳೇ ನಮಗೆ ರಸ್ತೆ ನಿರ್ಮಾಣ ಮಾಡಿಕೊಡಿ.. ಹುಬ್ಬಳ್ಳಿಯಲ್ಲಿ ಚಿಣ್ಣರ ಫೇಸ್‌ಬುಕ್ ಅಭಿಮಾನ'' ಎಂಬ ಶೀರ್ಷಿಕೆಯಡಿಯಲ್ಲಿ ಜುಲೈ18ರಂದು ಈಟಿವಿ ಭಾರತ್ ವಿಶೇಷ ವರದಿ ಪ್ರಕಟಿಸಿತ್ತು.
ಈ ವರದಿಯಿಂದ ಎಚ್ಚೆತ್ತ ಮಹಾನಗರ ಪಾಲಿಕೆ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ. ಕಳೆದ 20 ವರ್ಷಗಳಿಂದ ಡಾಂಬರು ಕಾಣದ ರಸ್ತೆಯ ಕೆಸರಿನ ಮೇಲೆ ಜಲ್ಲಿಕಲ್ಲು ಹಾಕಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸ್ತಿದ್ದಾರೆ. ಸದ್ಯಕ್ಕೆ ಕೆಸರಿನಿಂದ ಮುಕ್ತಿ ದೊರಕಿಸಿದಂತಾಗಿದ್ದು, ರಸ್ತೆ ಬಗ್ಗೆ ವರದಿ ಬಿತ್ತರಿಸಿದ ಈಟಿವಿ ಭಾರತ್‌ಗೆ ಕಾಲೋನಿಯ ನಿವಾಸಿಗಳು ಧನ್ಯವಾದ ತಿಳಿಸಿದ್ದಾರೆ.