ಧಾರವಾಡ: ಪಶುವೈದ್ಯೆ ಡಾ. ಪ್ರಿಯಾಂಕ ರೆಡ್ಡಿ ಮೇಲಿನ ಅತ್ಯಾಚಾರ ಖಂಡಿಸಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆ ಸದಸ್ಯರು ಮೌನ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಡಾ. ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ಮಾಡಿ ಅವರನ್ನು ಜೀವಂತವಾಗಿ ಬರ್ಬರವಾಗಿ ಸುಟ್ಟ ಘಟನೆಯನ್ನು ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಖಂಡಿಸುತ್ತದೆ. ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಯಾವುದೇ ಜಾತಿ ಧರ್ಮ ಸಮುದಾಯ ನೋಡದೇ ಗಲ್ಲಿಗೇರಿಸಿ ಎಂದು ಆಗ್ರಹಿಸಿದರು.
ಇನ್ನು ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ಕಡ್ಡಾಯ ಕಾನೂನು ಶೀಘ್ರ ಜಾರಿಗೆ ತರಬೇಕು. ಬಲತ್ಕಾರದ ವಿಚಾರಣೆಗಳನ್ನು ನಡೆಸಲು ವಿಶೇಷ ನ್ಯಾಯಾಲಯ ಮತ್ತು ಅದರಲ್ಲಿ ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಬಲತ್ಕಾರಕ್ಕೊಳಗಾದ ಮಹಿಳೆ ಮತ್ತು ಸಾಕ್ಷಿಗಳಿಗೆ ಸರ್ಕಾರವು ಎಲ್ಲ ರೀತಿಯ ಸುರಕ್ಷತೆ ಮತ್ತು ಪರಿಹಾರ ದೊರಕಿಸಿಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.