ಹುಬ್ಬಳ್ಳಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಪಕ್ಷದ ಓರ್ವ ನಿಷ್ಟಾವಂತ ಕಾರ್ಯಕರ್ತನಾಗಿ ಸರ್ಕಾರ ನನಗೆ ನೀಡಿದ ಸ್ಥಾನವನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ತಮಗೆ ಒಲಿದು ಬಂದ ಸ್ಥಾನದ ಕುರಿತು ನಗರದಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ನೇಕಾರ ಸಮುದಾಯಕ್ಕೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಸಚಿವ ಸ್ಥಾನ ನೀಡುವಂತೆ ಎಂದೂ ಕೇಳಿರಲಿಲ್ಲ. ಆದರೂ, ಮುಖ್ಯಮಂತ್ರಿಗಳು ನನ್ನನ್ನು ನಿಗಮದ ಅಧ್ಯಕ್ಷನನ್ನಾಗಿ ನೇಮಿಸಿದ್ದು ಸಂತೃಪ್ತಿ ತಂದಿದೆ ಎಂದರು.
ನಿಗಮದ ಆರ್ಥಿಕತೆ ಸಂಕಷ್ಟದಲ್ಲಿದೆ. ಇದನ್ನು ಪುನರುಜ್ಜೀವನ ಮಾಡುವ ಹೊಣೆ ನನ್ನ ಮೇಲಿದೆ. ನಿಗಮ 110 ಕೋಟಿ ರೂ ಸಾಲದಲ್ಲಿದೆ. ಶಿಕ್ಷಣ ಇಲಾಖೆ ವಿದ್ಯಾ ವಿಕಾಸ ಯೋಜನೆಯ 20 ಕೋಟಿ ಬಾಕಿ ಹಣ ಬರಬೇಕಿದೆ. ಶಿಕ್ಷಣ ಇಲಾಖೆಯ ಜತೆಗಿನ ಒಪ್ಪಂದವನ್ನು ಐದು ವರ್ಷ ಮುಂದುವರೆಸುವಂತೆ ಸಿಎಂಗೆ ಕೊರುವೆ ಎಂದರು.
ಸಿಬ್ಬಂದಿಗೆ ಮೂರು ತಿಂಗಳನಿಂದ ಸಂಬಳವಿಲ್ಲ. ಈ ಹಿಂದೆ ರಾಜ್ಯ, ನಿಗಮಕ್ಕೆ 30 ಕೋಟಿ ಕೊಡುತ್ತಿತ್ತು. ಈಗ 15 ಕೋಟಿ ಕೊಡುತ್ತಿದೆ. ಮೊದಲಿನಂತೆ 30 ಕೋಟಿ ಕೊಡುವಂತೆ ಸಿಎಂಗೆ ಒತ್ತಡ ಹೇರುವೆ ಎಂದರು.