ಹುಬ್ಬಳ್ಳಿ: ಬಿಎಸ್ವೈ ಸಿಎಂ ಸ್ಥಾನದಿಂದ ಕೆಳಗಿಳಿಯೋದು ಪಕ್ಕಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಆಗ್ತಾರೆ, ಆದ್ರೆ ಅದು ಯಾವಾಗ ಅನ್ನೋದು ಗೊತ್ತಿಲ್ಲ ಎಂದರು. ಇನ್ನು ಸಿಎಂ ಯಡಿಯೂರಪ್ಪನವರೇ ಪೂರ್ಣಾವಧಿಗೆ ಸಿಎಂ ಆಗಿ ಇರುತ್ತಾರೆ ಎಂಬ ಅರುಣ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಅವರಿಂದ ತೆಗೆದು ಹಾಕ್ತೀವಿ ಅಂತ ಹೇಳೋಕೆ ಆಗುತ್ತಾ ಎಂದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾವೇ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಹಳೇ ಮೈಸೂರು, ರಾಜ್ಯದಲ್ಲಿ ನಾವೇ ನಂಬರ್ ಒನ್ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಎನ್ಡಿಎ ಜೊತೆ ಹೆಚ್‌ಡಿಕೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ನವರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಮೀಸಲಾತಿ ಕೇಳೋದು ತಪ್ಪಲ್ಲ. ನಾನು ಸಿಎಂ ಆಗಿದ್ದ ನಾಲ್ಕು ಸಮುದಾಯವನ್ನು ಶಿಫಾರಸು ಮಾಡಿದ್ದೆ. ಕೇಂದ್ರದಿಂದ ಇಲ್ಲಿಯವರೆಗೂ ಉತ್ತರ ಬಂದಿಲ್ಲ. ಇದನ್ನು ಈಶ್ವರಪ್ಪ ಕೇಂದ್ರ ಸರ್ಕಾರವನ್ನು ಕೇಳಲಿ. ಅವರು ಕುರುಬ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ಆರ್ಎಸ್ಎಸ್ ಹಾಗೂ ಈಶ್ವರಪ್ಪ ಕುತಂತ್ರ. ಬಿಜೆಪಿ ಸರ್ಕಾರವಿದೆ. ಈಶ್ವರಪ್ಪ ಹೋರಾಟ ಮಾಡೋದು ಬಿಟ್ಟು ಮೀಸಲಾತಿ ಕೊಡಿಸಲಿ ಎಂದು ಸವಾಲು ಹಾಕಿದರು.