ಹುಬ್ಬಳ್ಳಿ : ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಬಿಜೆಪಿಯವರು ಏನು ಅಭಿವೃದ್ಧಿ ಮಾಡಿಲ್ಲ. ಇವಾಗ ಹಾನಗಲ್ಲಿನಲ್ಲಿ 7 ಸಾವಿರ ಮನೆ ಕೊಟ್ಟಿದ್ದೇನೆ ಎಂದು ಆದೇಶ ಮಾಡಿಕೊಂಡು ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗಾಗಿ ಸಿಎಂ ಬೊಮ್ಮಾಯಿಯವರು ಎರಡುವರೆ ವರ್ಷದಲ್ಲಿ ಒಂದು ಮನೆ ಕೊಟ್ಟಿಲ್ಲ. ಈಗ ಹಾನಗಲ್‌ನಲ್ಲಿ ಮನೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಈವರೆಗೂ ಒಂದೇ ಒಂದು ಮನೆ ಕಟ್ಟಿಲ್ಲ, ರಸ್ತೆ ಮಾಡಿಲ್ಲ ಎಂದರು.
ಬಿಜೆಪಿಯವರಿಗೆ ದುಡ್ಡು ಹಂಚೋದೆ ಕೆಲಸ. ಒಂದೊಂದು ಕ್ಷೇತ್ರದಲ್ಲಿ 10 ರಿಂದ 12 ಸಚಿವರು ಠಿಕಾಣಿ ಹೂಡಿದ್ದಾರೆ. ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇವೆ. ಹಣದ ಚೀಲ ತುಂಬಿಕೊಂಡು ಬಂದಿದ್ದಾರೆ. ನಾನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಕೆ ಬೊಮ್ಮಾಯಿಯವರಿಗೆ ಸವಾಲ್ ಹಾಕಿದ್ದೆ. ಆದ್ರೆ, ಅವರು ಅಸೆಂಬ್ಲಿಯಲ್ಲಿ ಚರ್ಚೆ ಮಾಡೋಣ ಅಂತಾರೆ ಎಂದು ಕುಟುಕಿದರು.
ಜನತಾ ನ್ಯಾಯಲಯದ ಮುಂದೆ ಚರ್ಚೆ ಮಾಡೋಕೆ ಯಾಕೆ ಭಯ, ಅವರು ಹೇಳಿದ್ದು ಸತ್ಯ ಇರೋದಾದ್ರೆ ಜನರ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡೋಕೆ ಯಾಕೆ ಭಯಪಡುತ್ತಿದ್ದಾರೆ. ಕಾಂಗ್ರೆಸ್ ಎಲ್ಲಾ ಸಮುದಾಯದ ಪರವಾಗಿದೆ ಎಂದರು.
ಅನ್ನಭಾಗ್ಯ ಯೋಜನೆ ಬಗ್ಗೆ ಕೇಂದ್ರ ಅನುದಾನ ಹೆಚ್ಚಿದೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೊಮ್ಮಾಯಿ ಪೆದ್ದರ ರೀತಿ ಮಾತನಾಡುತ್ತಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಲಿಂಗಾಯತ ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಸ್ವಾಮೀಜಿಗಳ ಬಗ್ಗೆ ಮಾತನಾಡುವುದಿಲ್ಲ. ಟ್ವೀಟ್ ಮಾಡೋದೆ ಬಿಜೆಪಿಯವರ ಕಸುಬಾಗಿದೆ ಎಂದರು.
ಇದನ್ನೂ ಓದಿ: ಬಿಜೆಪಿ ಸುನಾಮಿಯಲ್ಲಿ ಕಾಂಗ್ರೆಸ್ ಸಂಪೂರ್ಣ ಕೊಚ್ಚಿ ಹೋಗಲಿದೆ: ಸಿಎಂ ಬೊಮ್ಮಾಯಿ