ಹುಬ್ಬಳ್ಳಿ: ಮೈತ್ರಿ ಸರ್ಕಾರದ ಅಸ್ಥಿರತೆಯ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ. ದೇವೇಗೌಡರ ಕುಟುಂಬ ಒಂದು ನಿಮಿಷನೂ ಅಧಿಕಾರದಲ್ಲಿರೋದು ಸಿದ್ದರಾಮಯ್ಯಗೆ ಇಷ್ಟವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ, ಅವರ ಹೇಳಿಕೆಗಳು ಈ ಎಲ್ಲದರ ಹಿಂದಿನ ಸೂತ್ರದಾರ ಸಿದ್ದರಾಮಯ್ಯ. ಮೈತ್ರಿ ಸರ್ಕಾರದಲ್ಲಿ ಜಿ. ಪರಮೇಶ್ವರಗೆ ನಾಯಕತ್ವ ಸಿಗುತ್ತಿದೆ ಎಂಬ ಆತಂಕ ಸಿದ್ದರಾಮಯ್ಯಗೆ ಇದೆ ಎಂದರು.
ಬಜೆಟ್ ಕುರಿತು ಸಿದ್ಧರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೃಷಿ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅವರು ಬಜೆಟ್ ಪೂರ್ಣವಾಗಿ ಓದಿಲ್ಲ ಎಂದು ಭಾವಿಸಿದ್ದೇನೆ ಎಂದು ವ್ಯಂಗ್ಯವಾಡಿದರು. ಉದ್ಯೋಗ ಖಾತ್ರಿ ಯೋಜನೆಗೆ 60 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಆದರೇ ಯುಪಿಎ ಸರ್ಕಾರ ಇದ್ದಾಗ 47 ಸಾವಿರ ಕೋಟಿ ನೀಡಿದ್ದರು. 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಸೌಲಭ್ಯ ರೂಪಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.
ದೇಶದ ರೈತರನ್ನು ಶೋಷಣೆ ಮಾಡಿದ್ದು ಕಾಂಗ್ರೆಸ್ ಎಂದು ಹರಿಹಾಯ್ದರು. ರೈತರ ಈಗಿನ ಸಂಕಷ್ಟಕ್ಕೆ ಕಾಂಗ್ರೆಸ್ ಕಾರಣ, ನಾವಲ್ಲ ಎಂದರು. ಸಿದ್ದರಾಮಯ್ಯ ರೈತರನ್ನು ಪುರಸ್ಕಾರ ಮಾಡಿದ್ದಕ್ಕೆ 130 ಇದ್ದದ್ದು, 78ಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು. ನಾವು 280 ಇದ್ದವರು 304 ಕ್ಕೆ ತಲುಪಿದ್ದೇವೆ. ಜನಪರ ಕಾಳಜಿ ನೋಡಿಯೇ ಚುನಾವಣೆಯಲ್ಲಿ ಜನ ತೀರ್ಪು ನೀಡಿದ್ದಾರೆ ಎಂದು ಅವರು ಹೇಳಿದರು. ಮುಂದಿನ 10 ವರ್ಷ ದೇಶ ಯಾವ ದಿಕ್ಕಿನಲ್ಲಿ ನಡೆಯಬೇಕು ಎಂಬುದನ್ನು ಬಜೆಟ್ ಬಿಂಬಿಸುತ್ತಿದೆ. ಇದೊಂದು ದೂರದೃಷ್ಟಿಯುಳ್ಳ ಬಜೆಟ್. ಸಾಮಾನ್ಯ ಜನರನ್ನ ದೃಷ್ಟಿಯಲ್ಲಿಟ್ಟುಕೊಂಡ ಬಜೆಟ್ ರೂಪಿಸಲಾಗಿದೆ ಎಂದರು.