ಹುಬ್ಬಳ್ಳಿ: ದಿ. ಸಿ.ಎಸ್. ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಅವರು ಟಿಕೆಟ್ ಕೊಡಿ ಎಂದು ಕೇಳಿರಲಿಲ್ಲ. ಆದ್ರೆ, ನಾವೇ ಶಿವಳ್ಳಿ ಸ್ಥಾನ ತುಂಬುವುದಕ್ಕೆ ಸೂಕ್ತ ವ್ಯಕ್ತಿ ಎಂದು ಪರಿಗಣಿಸಿ ಕಣಕ್ಕಿಳಿಸಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕುಂದಗೋಳದ ಸಂಶಿಯಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಶಿವಳ್ಳಿ ಬಡವರ ಪರ ಯೋಚನೆ ಮಾಡುತ್ತಿದ್ದರು. ಅವರ ಅಗಲಿಕೆ ನಮಗೆ ಬಹಳ ನೋವು ತಂದಿದೆ. ದಿ. ಶಿವಳ್ಳಿಯರು ನಮ್ಮನ್ನು ಬಿಟ್ಟು ಹೋಗಿಲ್ಲ. ಅವರು ಈ ಕ್ಷೇತ್ರದ ಜನತೆಯ ಮನದಲ್ಲಿ ಇದ್ದಾರೆ. ಕುಸುಮಾ ಶಿವಳ್ಳಿಯವರಿಗೆ ನಿಮ್ಮ ಮತ ನೀಡುವ ಮೂಲಕ ಶಿವಳ್ಳಿಯವರ ಆತ್ಮಕ್ಕೆ ಶಾಂತಿ ನೀಡಬೇಕು ಎಂದು ಕೋರಿಕೊಂಡರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಕ್ಸಮರ ನಡೆಸಿದ ಅವರು, ನರೇಂದ್ರ ಮೋದಿ ನನಗೆ 57 ಇಂಚು ಎದೆ ಇದೆ ಎಂದು ಹೇಳಿದ್ರೆ ಸಾಲದು. ಎದೆಯೊಳಗೆ ಪ್ರೀತಿ ಇರಬೇಕು. ಬಿಜೆಪಿಯವರಿಗೆ ಇರುವುದು ಬರಿಯ ಬೂಟಾಟಿಕೆ ಪ್ರೀತಿ ಎಂದು ಟಾಂಗ್ ನೀಡಿದರು.
ಬಿಜೆಪಿ ಕೋಮುವಾದಿ ಪಕ್ಷ ಹಾಗೇನೇ ಜನರ ಮಧ್ಯೆ ಬೆಂಕಿ ಇಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ನಾವೂ 37 ಸ್ಥಾನ ಗಳಿಸಿರುವ ಜೆಡಿಎಸ್ ಪಕ್ಷಕ್ಕೆ ಮೊರೆ ಹೋಗಿದ್ದೇವೆ ಎಂದರು.
ಬಿಜೆಪಿಯವರು ಮೋದಿ ಮುಖ ನೋಡಿ ವೋಟು ಕೇಳುತ್ತಾರೆ. ಹಾಗಿದ್ದರೆ ಕ್ಷೇತ್ರದಲ್ಲಿ ಎಸ್.ಐ ಚಿಕ್ಕನಗೌಡ್ರ ಯಾಕೆ ಚುನಾವಣೆಗೆ ನಿಂತಿದ್ದಾರೆ..? ನಾವು ಅಕ್ಕಿ ಕೊಟ್ಟವರು ಬಡವರು, ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಗುಜರಾತಿನಲ್ಲಿ ನರೇಂದ್ರ ಮೋದಿ ಒಂದು ಕೆಜಿ ಅಕ್ಕಿ ನೀಡಿದ್ದಾರಾ..? ಎಂದು ಇದೇ ವೇಳೆ ಸಿದ್ದರಾಮಯ್ಯ ಪ್ರಶ್ನಿಸಿದರು.
ಶ್ರೀಮಂತರ ಪರ ಕೆಲಸ ಮಾಡುತ್ತಿರುವ ಬಿಜೆಪಿಯನ್ನು ತಿರಸ್ಕರಿಸಿ. ಯಡಿಯೂರಪ್ಪ ಒಬ್ಬ ನಾಟಕಕಾರ. ಅವರು ಹಸಿರು ಶಾಲು ಶೋಕಿಗಾಗಿ ಹಾಕುತ್ತಿದ್ದಾರೆ.ಈ ಎಲ್ಲಾ ಕಾರಣಗಳಿಂದ ಈ ಬಾರಿ ಕುಂದಗೋಳ ಕ್ಷೇತ್ರದಲ್ಲಿ ಕುಸುಮಾ ಶಿವಳ್ಳಿ ಗೆಲ್ಲಿಸುವ ಮೂಲಕ ದಿ.ಶಿವಳ್ಳಿ ಆತ್ಮಕ್ಕೆ ಶಾಂತಿ ನೀಡಿ ಎಂದು ಮನವಿ ಮಾಡಿದರು.