ಹುಬ್ಬಳ್ಳಿ: ಇಲ್ಲಿನ ನಗರದ ನ್ಯಾಯಾಲಯದ ಮುಂದೆ ಕಾರ್ಮಿಕ ಇಲಾಖೆಯಿಂದ ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನವನ್ನು ಆರಂಭಿಸಲಾಗಿದೆ. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಇದಕ್ಕೆ ಚಾಲನೆ ನೀಡಿದರು. ಸ್ಕೊಡ್ ವೆಸ್ ಸಂಸ್ಥೆ ಸಹಯೋಗದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು.
ಉಚಿತ ಆರೋಗ್ಯ ಸೇವೆ: ಈಗಾಗಲೇ ನೋಂದಣಿ ಮಾಡಿಕೊಂಡಿರುವ ಹಾಗೂ ಹೊಸದಾಗಿ ನೋಂದಣಿ ಮಾಡಿಸಿಕೊಂಡಿರುವ ಜಿಲ್ಲೆಯ 15 ಸಾವಿರ ಕಾರ್ಮಿಕರಿಗೆ ಇದರ ಮೂಲಕ ಉಚಿತ ಆರೋಗ್ಯ ಸೇವೆ ದೊರೆಯಲಿದೆ. ಈ ವಾಹನವು ಇಸಿಜಿ, ಕೋವಿಡ್ 19 ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಇಲಾಖೆ ನಿರ್ದೇಶಿತ ಇತರೆ ಆರೋಗ್ಯ ಸೇವೆಗಳನ್ನು ನೀಡಲಿದೆ.
ಧಾರವಾಡ ಜಿಲ್ಲೆಯಲ್ಲಿ ಎರಡು ಚಿಕಿತ್ಸಾ ವಾಹನಗಳು ಕಾರ್ಯನಿರ್ವಹಿಸಲಿವೆ. ವೈದ್ಯಾಧಿಕಾರಿ, ಶುಶ್ರೂಷಕಿ, ಪ್ರಯೋಗಾಲಯ ತಜ್ಞರು, ಔಷಧ ವಿತರಣಾ ತಜ್ಞರು, ವೈದ್ಯಕೀಯ ಸಮಾಜ ಕಾರ್ಯಕರ್ತರು, ಚಾಲಕ, ಸಹಾಯಕ ಸಿಬ್ಬಂದಿಯನ್ನು ಘಟಕ ವಾಹನ ಹೊಂದಿರುತ್ತದೆ. ನೋಂದಾಯಿತ ಕಾರ್ಮಿಕರಿಗೆ ಸಿಗುವ ವೈದ್ಯಕೀಯ ಸೌಲಭ್ಯಗಳು ಮತ್ತು ಇತರೆ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿಯನ್ನು ಸಹ ಒದಗಿಸಲಿದೆ.
ಆಧುನಿಕ ಸ್ಟ್ರಚರ್, ಬೆಡ್, ಆಕ್ಸಿಜನ್ ಸಿಲಿಂಡರ್, ಪ್ರಥಮ ಚಿಕಿತ್ಸಾ ಕಿಟ್, ಲ್ಯಾಬ್ ಪರಿಕರಗಳು, ಜೀವನಾವಶ್ಯಕ ಔಷಧಿಗಳು, ಬಿಪಿ ಟೆಸ್ಟ್, ಇಸಿಜಿ ಸೌಲಭ್ಯ, ರೆಫ್ರಿಜರೇಟರ್, ವ್ಹೀಲ್ ಚೇರ್, ಇತರೆ ಪ್ರಯೋಗಾಲಯ ಸಲಕರಣೆಗಳನ್ನು ಹೊಂದಿರುತ್ತದೆ. ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ಹಾಗೂ ಶನಿವಾರದಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೇವೆಯನ್ನು ನೀಡಲಿದೆ. ಕಾರ್ಮಿಕ ನೋಂದಾಯಿತ ಕಾರ್ಡ್ ಹಾಗೂ ಆಧಾರ್ ಕಾರ್ಡ್ ತೋರಿಸಿ ಚಿಕಿತ್ಸೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ : ಮನೆ ಬಾಗಿಲಿಗೆ ಶ್ರಮಿಕ ಸಂಜೀವಿನಿ ಕ್ಲಿನಿಕ್ !