ಧಾರವಾಡ: ಪ್ರಸ್ತುತ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಈ ದುರಂತವನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ, ಕೋಡಿಹಳ್ಳಿ ಚಂದ್ರಶೇಖರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪರಿಸ್ಥಿತಿಯಲ್ಲಿ ಆಗಿರುವ ಹಾನಿಯನ್ನು ಅಂದಾಜಿಸುವಲ್ಲಿ ರಾಜ್ಯ ಸರ್ಕಾರ ಕೂಡ ವಿಫಲವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಜಾನುವಾರುಗಳು ಸತ್ತಿವೆ. ಹೊಲ-ಗದ್ದೆಗಳಲ್ಲಿನ ಅಪಾರ ಮೌಲ್ಯದ ಬೆಳೆ ನಾಶವಾಗಿದೆ. ಪಂಪಸೆಟ್‌ಗಳು ಕೊಚ್ಚಿ ಹೋಗಿವೆ, ಮಳೆ ಇಲ್ಲದ ಕಡೆ ಕೂಡಾ ಪ್ರವಾಹ ಬಂದು ಹಾನಿಯಾಗಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಸ್ಥಿತಿ ಕಣ್ಣಾರೆ ಕಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದಲ್ಲಿ 10 ಸಾವಿರ ಕೋಟಿ ಹಾನಿಯಾಗಿದೆ, ಕೂಡಲೇ ಕೇಂದ್ರ ಸರ್ಕಾರ ಮೂರು ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮನವಿ ಮಾಡುತ್ತಾರೆ. ಈ ಮಧ್ಯೆ ಸಚಿವರಾದ ನಿರ್ಮಲಾ ಸಿತಾರಾಮನ್, ಅಮಿತ ಶಾ ಭೇಟಿ ನೀಡಿದ ನಂತರ ಕೇಂದ್ರ ಸರ್ಕಾರ ಒಂದಿಷ್ಟು ಪುಡಿಗಾಸನ್ನು ಗಣಪತಿಗೆ ದೇಣಿಗೆ ನೀಡಿದಂತೆ ನೀಡುತ್ತಿದೆ ಇದು ಸರಿಯಲ್ಲ. ಕರ್ನಾಟಕದ ರೈತರಿಗೆ ಮಾಡಿದ ಅಪಮಾನ ಇದು. ಕೇಂದ್ರ ಸರ್ಕಾರ ಕರ್ನಾಟದ ಈಗಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಲಿ. ರಾಜ್ಯದ ಸಂಸದರು ಇದೆಲ್ಲ ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರದ ಗಮನ ಸೆಳೆದು ಜನರಿಗೆ ಸೂಕ್ತ ನೆರವು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.