ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಸಾವಿಗೆ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರ ಕಾರಣ ಎಂದು ಹೇಳಿಕೆ ನೀಡಿದ್ದ ಶ್ರೀರಾಮುಲು ಹೇಳಿಕೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ.
ಕಡಪಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಶ್ರೀರಾಮುಲು ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ದಿ. ಸಿ.ಎಸ್.ಶಿವಳ್ಳಿ ಅವರನ್ನ ಸಚಿರನ್ನಾಗಿ ಮಾಡಿದ ಬಳಿಕ ಜಿಲ್ಲಾ ಉಸ್ತುವಾರಿ ಮಾಡಬೇಕಿತ್ತು. ನಿಜವಾಗಿ ತೊಂದರೆ ಕೊಟ್ಟವರು ಕಾಂಗ್ರೆಸ್ನವರೇ. ನೆಗ್ಲೇಟ್ ಮಾಡಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಶಿವಳ್ಳಿ ಅವರನ್ನ ಯಾಕೆ ಮಂತ್ರಿ ಮಾಡಲಿಲ್ಲ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.
ಸಿದ್ದರಾಮಯ್ಯ ತಾವೊಬ್ಬರು ಕುರುಬರಿದ್ದು, ಉಳಿದ ಕುರುಬರನ್ನು ಮಂತ್ರಿ ಏಕೆ ಮಾಡಲಿಲ್ಲ. ಕುಮಾರಸ್ವಾಮಿ ಸರ್ಕಾರ ಮಾಡಿದ ಮೇಲೆ ಮೊದಲನೇ ಕ್ಯಾಬಿನೆಟ್ ಮಂತ್ರಿ ಮಾಡಬಹುದಿತ್ತು. ನಂತರ ಶಿವಳ್ಳಿ ಅವರನ್ನ ಮಂತ್ರಿ ಮಾಡಿದ್ರು. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಿಲ್ಲ. ಶಿವಳ್ಳಿ ಅವರ ಬಗ್ಗೆ ಕಾಂಗ್ರೆಸ್ ನಿರ್ಲಕ್ಷ್ಯ ತೋರಿದೆ ಹೊರತು ಬಿಜೆಪಿ ಅವರ ಬಗ್ಗೆ ಏನೂ ಮಾತನಾಡಿಲ್ಲ. ಶಿವಳ್ಳಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡದೇ ಇರುವುದೇ ಒಂದು ಕೊರಗು ಇತ್ತು. ಅದಕ್ಕೆ ಹೀಗಾಗಿರಬಹುದು ಎಂದು ಪರೋಕ್ಷವಾಗಿ ಶ್ರೀರಾಮುಲು ಹೇಳಿಕೆಯನ್ನು ಸಮರ್ಥಿಸಿಕೊಂಡರು.