ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್ ಆರ್ಭಟ ಮತ್ತೆ ಹೆಚ್ಚಾಗ್ತಿದೆ. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವವರ ಸಂಖ್ಯೆ ಸಹ ದುಪ್ಪಟ್ಟಾಗಿದೆ. ಆದರೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ವರದಿಗಳು ಸಕಾಲಕ್ಕೆ ಸಿಗದ ಹಿನ್ನೆಲೆ ಜನರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಸರ್ಕಾರ ಕೋವಿಡ್ ಟೆಸ್ಟ್ ಮತ್ತೆ ಹೆಚ್ಚಳ ಮಾಡಿದೆ. ಆದರೆ, ಉತ್ತರ ಕರ್ನಾಟಕದ ಸಂಜೀವಿನಿ ಎನಿಸಿಕೊಂಡಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಕೋವಿಡ್ ಟೆಸ್ಟ್ ಮಾಡಿಸಿದವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿರುವ ಲ್ಯಾಬ್ನಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಕೋವಿಡ್ ವರದಿಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಸಾಕಷ್ಟು ಜನರು ಟೆಸ್ಟ್ ಮಾಡಿಸಿದ್ದು, ಸಕಾಲಕ್ಕೆ ವರದಿಗಳು ಕೈ ಸೇರದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಧಾರವಾಡ ಜಿಲ್ಲಾಡಳಿತ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿದ್ದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ, ಕೋವಿಡ್ ಮೂರನೇ ಅಲೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡಿದೆ. ಜಿಲ್ಲೆಯಲ್ಲಿ ಟೆಸ್ಟ್ಗಳನ್ನ ಹೆಚ್ಚಿಗೆ ಮಾಡಲು ಸೂಚನೆ ನೀಡಿದ್ದಾರೆ. ಇದರಂತೆ ನಿತ್ಯ ನಾಲ್ಕು ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಮಾಡುತ್ತಿರುವ ಜಿಲ್ಲಾ ಆಡಳಿತಕ್ಕೆ ಸರ್ವರ್ ಸಮಸ್ಯೆ ಎದುರಾಗಿದ್ದು, ಕೋವಿಡ್ ವರದಿ ನೀಡಲು ವಿಳಂಬವಾಗುತ್ತಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಓದಿ: ಪಾದಯಾತ್ರೆ ಕೈಬಿಡಿ, ಜನತೆ ಬಳಿ ಕ್ಷಮೆ ಕೇಳಿ: ಕೈ ನಾಯಕರಿಗೆ ಆರಗ ಜ್ಞಾನೇಂದ್ರ ಆಗ್ರಹ